ಡಾ.ಕೆ.ರಾಧಾಕೃಷ್ಣನ್ ಅವರಿಗೆ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ

ಇಸ್ರೋ ಅಧ್ಯಕ್ಷರಾಗಿದ್ದ ಡಾ.ಕೆ.ರಾಧಾಕೃಷ್ಣನ್ ಅವರಿಗೆ ಬುಧವಾರ ಬೆಂಗಳೂರು ಪ್ರೆಸ್ ಕ್ಲಬ್...
ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಡಾ.ಕೆ.ರಾಧಾಕೃಷ್ಣನ್
ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಡಾ.ಕೆ.ರಾಧಾಕೃಷ್ಣನ್
Updated on

ಬೆಂಗಳೂರು: ಇಸ್ರೋ ಅಧ್ಯಕ್ಷರಾಗಿದ್ದ ಡಾ.ಕೆ.ರಾಧಾಕೃಷ್ಣನ್ ಅವರಿಗೆ ಬುಧವಾರ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ 'ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಮಂಗಳಯಾನದ ಯಶಸ್ಸಿನ ಮೂಲಕ ಸಾಕಷ್ಟು ಸುದ್ದಿಯಾದ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಅವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಬುಧವಾರ 'ವರ್ಷದ ವ್ಯಕ್ತಿ ಪ್ರಶಸ್ತಿ' ನೀಡಿ ಗೌರವಿಸಿತು.

ಇದೇ ರೀತಿ, ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ, ಜಿ.ಎನ್. ಮೋಹನ್, ಶಶಿ ಪ್ರಭಾ ಹಿರೇಮಠ್ ಹಾಗೂ ಹಿರಿಯ ಪತ್ರಿಕಾ ಛಾಯಾಗ್ರಾಹಕ ಪಿ.ಸಾರಂಗ ಪಾಣಿ 'ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ'ಗೆ ಭಾಜನರಾದರು. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪ್ರೆಸ್ ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಸರಳ-ಸುಂದರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಪ್ರದಾನದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜತೆಗೆ ಪತ್ರಿಕಾ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ. ಸಮಾಜದ ಅಭಿವೃದ್ಧಿಗೆ, ಸಮಾನತೆಗೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತಂದು ಸಮಾನತೆಯ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ರಾಧಾಕೃಷ್ಣನ್, ಬಾಹ್ಯಾಕಾಶ ಸಂಸ್ಥೆಯ ಎಲ್ಲ ಕಾರ್ಯಗಳಲ್ಲಿ ಮಾಧ್ಯಮ ನೀಡಿದ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು. ಸರ್ಕಾರದ ಬೆಂಬಲವೂ ಮಂಗಳಯಾನದ ಯಶಸ್ಸಿಗೆ ಕಾರಣ, ಸಾಹಿತ್ಯ, ಶಿಕ್ಷಣ, ಕೈಗಾರಿಕೆ, ಸಂಗೀತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಪ್ರಮುಖ ಸ್ಥಾನ ಪಡೆದಿದೆ. ಈಗ ಮಂಗಳಯಾನದ ಯಶಸ್ಸಿಗೆ ಕಾರಣವಾದ ಪೀಣ್ಯ ಬಾಹ್ಯಾಕಾಶ ಕೇಂದ್ರ ಕರ್ನಾಟಕದ ಘನತೆಯನ್ನು ಮುಗಿಲೆತ್ತರಕ್ಕೆ ಹೆಚ್ಚಿಸಿದೆ ಎಂದು ಬಣ್ಣಿಸಿದರು.

'ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ' ಪುರಸ್ಕೃತರ ಪರವಾಗಿ ಹಿರಿಯ ಪತ್ರಕರ್ತ ಪಿ.ರಾಮಯ್ಯ ಮಾತನಾಡಿದರು. ಈ ಹಿಂದೆ ಸರ್ಕಾರ ತಮ್ಮನ್ನು ಪತ್ರಕರ್ತರ ಪರವಾಗಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿತ್ತು. ಆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅನೇಕ ಸಾಮಾಜಿಕ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾವಿಸುವ ಮೂಲಕ ಪತ್ರಕರ್ತರ ಪರ ಕೆಲಸ ಮಾಡಲು ಸಾಧ್ಯವಾಗಿತ್ತು. ಇಂದಿನ ಸರ್ಕಾರವೂ ಆ ಸಂಪ್ರಾದಾಯವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ, ಬೆಂಗಳೂರು ಪ್ರೆಸ್ ಕ್ಲಬ್ ಹೊರ ತಂದ 2015ನೇ ಸಾಲಿನ ಡೈರಿ ಬಿಡುಗಡೆ ಮಾಡಿದರು. ಗೃಹ ಸಚಿವ ಕೆ.ಜೆ.ಜಾರ್ಜ್ ಪ್ರೆಸ್ ಕ್ಲಬ್ ವೈಫೈ ಸೇವೆಯನ್ನು ಉದ್ಗಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೇವೆಯ ಮೊದಲ ಬಳಕೆದಾರರಾಗಿ ಚಾಲನೆ ನೀಡಿದರು. ವಾರ್ತಾ ಸಚಿವ ರೋಷನ್ ಬೇಗ್, ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಜರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀದರ್ ಸ್ವಾಗತಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com