ವಾದ್ರಾಗೆ ಬಿಜೆಪಿ ಭಯ: 4 ಸಂಸ್ಥೆಗಳಿಗೆ ಬೀಗ

ಅಕ್ರಮ ಭೂ ಖರೀದಿ ಅವ್ಯವಹಾರ ಪ್ರಕರಣದ ವಿಚಾರಣೆಯ ಭೀತಿ ಎದುರಿಸುತ್ತಿರುವ ರಾಬರ್ಟ್ ವಾದ್ರಾ ಅವರು ಹರ್ಯಾಣದಲ್ಲಿನ ತಮ್ಮ ನಾಲ್ಕು ಸಂಸ್ಥೆಗಳಿಗೆ ಬೀಗ ಹಾಕಿದ್ದಾರೆ..!
ಸಾಂದರ್ಭಿಕ ಚಿತ್ರ-ಅಕ್ರಮ ಭೂ ಅವ್ಯವಹಾರ ಆರೋಪ ಎದುರಿಸುತ್ತಿರುವ ರಾಬರ್ಟ್ ವಾದ್ರಾ
ಸಾಂದರ್ಭಿಕ ಚಿತ್ರ-ಅಕ್ರಮ ಭೂ ಅವ್ಯವಹಾರ ಆರೋಪ ಎದುರಿಸುತ್ತಿರುವ ರಾಬರ್ಟ್ ವಾದ್ರಾ
Updated on

ನವದೆಹಲಿ: ಅಕ್ರಮ ಭೂ ಖರೀದಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಹರ್ಯಾಣದಲ್ಲಿನ ತಮ್ಮ ನಾಲ್ಕು ಸಂಸ್ಥೆಗಳಿಗೆ ಬೀಗ ಹಾಕಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಿದ್ದಂತೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಶನಿಕಾಟ ಶುರುವಾದಂತಿದ್ದು, ಹರ್ಯಾಣದ ನೂತನ ಬಿಜೆಪಿ ಸರ್ಕಾರ ರಾಬರ್ಟ್ ವಾದ್ರಾ ಅವರ ಅಕ್ರಮ ಭೂ ವ್ಯವಹಾರ ಪ್ರಕರಣವನ್ನು ತನಿಖೆ ನಡೆಸುತ್ತೇವೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಹರ್ಯಾಣದಲ್ಲಿರುವ ವಾದ್ರಾ ಅವರ 6 ಕಂಪನಿಗಳ ಪೈಕಿ 4 ಕಂಪನಿಳಿಗೆ ಬೀಗ ಹಾಕಲಾಗಿದೆಯಂತೆ.

ಪ್ರಮುಖ ಆಂಗ್ಲ ದಿನಪತ್ರಿಕೆಯ ವರದಿ ಮಾಡಿರುವಂತೆ ಕೇಂದ್ರದ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ದಾಖಲೆಗಳಲ್ಲಿರುವಂತೆ ಹರ್ಯಾಣ ಮತ್ತು ರಾಜಸ್ತಾನ ರಾಜ್ಯಗಳಲ್ಲಿರುವ ರಾಬರ್ಟ್ ವಾದ್ರಾ ಅವರ 6 ಸಂಸ್ಥೆಗಳ ಪೈಕಿ 4 ಸಂಸ್ಥೆಗಳನ್ನು ಮುಚ್ಚಲಾಗಿದೆ.  Lifeline Agrotech Private Limited, Greenwave Agro Private Limited, Rightline Agriculture Private Limited and Primetime Agro Private Limited ಹೆಸರಿನ ನಾಲ್ಕು ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಇನ್ನುಳಿದ 2 ಸಂಸ್ಥೆಗಳಾದ  Future Infra Agro Private Limited and Best Seasons Agro Private Limited ಕೂಡ ಮುಚ್ಚುವ ಹಾದಿಯಲ್ಲಿದೆಯಂತೆ. ಈ ಸಂಸ್ಥೆಗಳು ಆರಂಭವಾದ ದಿನದಿಂದ ಈವರೆಗೂ ಸರ್ಕಾರಕ್ಕೆ ತನ್ನ ವಾರ್ಷಿಕ ಆದಾಯ ವರದಿಯನ್ನಾಗಲಿ ಅಥವಾ ಬ್ಯಾಲೆನ್ಸ್ ಶೀಟ್ ಅನ್ನಾಗಲಿ ಸಲ್ಲಿಕೆ ಮಾಡಿಯೇ ಇಲ್ಲವಂತೆ.

ಕಳೆದ ಮೇ ತಿಂಗಳವರೆಗೂ ಕಾರ್ಯ ಪ್ರವೃತ್ತವಾಗಿದ್ದ ಈ ಸಂಸ್ಥೆಗಳು ಮೇ ತಿಂಗಳ ಬಳಿಕ ಅಂದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದವು ಎಂದು ವರದಿಯಲ್ಲಿ ಹೇಳಲಾಗಿದೆ.

ಬಿಜೆಪಿಗೆ ಹೆದರಿ ಭೂ ಮಾರಾಟಕ್ಕೆ ಮುಂದಾದ ವಾದ್ರಾ..?
ಇನ್ನು ಪತ್ರಿಕೆಯ ವರದಿಯಲ್ಲಿ ಬಿಜೆಪಿ ಸರ್ಕಾರದ ತನಿಖೆಗೆ ವಾದ್ರಾ ಹೆದರಿದ್ದಾರೆ ಎಂದು ಹೇಳಲಾಗಿದ್ದು, ತನಿಖೆಯಿಂದಾಗಿಯೇ ರಾಬರ್ಟ್ ವಾದ್ರಾ ರಾಜಸ್ತಾನ ಮತ್ತು ಹರ್ಯಾಣದಲ್ಲಿರುವ ತಮ್ಮ ನೂರಾರು ಎಕರೆ ಭೂಮಿಯನ್ನು ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ವರದಿ ಮಾಡಲಾಗಿದೆ. ಇದೇ ವಿಚಾರವಾಗಿ ಪತ್ರಕರ್ತರೊಬ್ಬರು ವಾದ್ರಾ ಅವರನ್ನು ಕಾರ್ಯಕ್ರಮವೊಂದರಲ್ಲಿ ಪದೇ ಪದೇ ಪ್ರಶ್ನಿಸಿದಾಗ ಪತ್ರಕರ್ತನ ವಿರುದ್ಧ ಗರಂ ಆಗಿದ್ದ ವಾದ್ರಾ, ಆತನ ಕೈಯಲ್ಲಿದ್ದ ಮೈಕ್ ಅನ್ನು ಕಿತ್ತೆಸೆದು ಪತ್ರಕರ್ತನನ್ನು ತಳ್ಳಿಕೊಂಡೇ ಕಾರಿನತ್ತ ಹೆಜ್ಜೆಹಾಕಿದ್ದರು. ಈ ಪ್ರಕರಣ ತೀವ್ರ ಟೀಕೆಗೆ ಗುರಿಯಾಗಿತ್ತು. ಬಿಜೆಪಿ ಸೇರಿದಂತೆ ಹಿರಿಯ ಪತ್ರಕರ್ತರು ವಾದ್ರಾ ಅವರ ನಡವಳಿಕೆಯನ್ನು ಟೀಕಿಸಿದ್ದರು.

ರಾಬರ್ಟ್ ವಾದ್ರಾ ಅವರ ಎಲ್ಲಾ 6 ಸಂಸ್ಥೆಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಸಂಘಟಿತ ವಲಯಕ್ಕೆ ಸೇರಿಸಲಾಗಿತ್ತು. ಸಂಘಟಿತ ವಲಯಕ್ಕೆ ಸೇರಿದ 2 ವರ್ಷಗಳ ಅವಧಿಯಲ್ಲಿಯೇ ವಾದ್ರಾ ಅವರ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆಯಂತೆ. ಆದರೆ ರಾಬರ್ಟ್ ವಾದ್ರಾ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಪಕ್ಷ, ವಾದ್ರಾ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಓರ್ವ ಭಾರತೀಯ ಪ್ರಜೆಯಾಗಿ ಸಂಸ್ಥೆಯನ್ನು ಹೊಂದುವ ಹಕ್ಕು ಅವರಿಗಿದೆ. ಕಾಂಗ್ರೆಸ್ ಸರ್ಕಾರ ಕೂಡ ನಿಯಮಾವಳಿ ಮತ್ತು ಕಾನೂನು ಪ್ರಕಾರವಾಗಿಯೇ ನಡೆದುಕೊಂಡಿದೆ ಎಂದು ಹೇಳಿಕೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com