
ನವದೆಹಲಿ: ಕೊನೆಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದೆ. ಸುಧಾರಣೆ ಮತ್ತು ಆಡಳಿತಕ್ಕೆ ಚುರುಕು ನೀಡಲು ಮೋದಿ ಅವರು ನ.9ಕ್ಕೆ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಬಿಜೆಪಿ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಪುತ್ರ ಜಯಂತ್ ಸಿನ್ಹಾ ಹಾಗೂ ಕಲ್ಲಿದ್ದಲು ಹಗರಣ ಬಯಲಿಗೆಳೆದ ಖ್ಯಾತಿಯ ಚಂದ್ರಾಪುರ ಸಂಸದ ಹಂಸರಾಜ್ ಅಹಿರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಮೋದಿ ಆಪ್ತರೂ ಆಗಿರುವ ಪರಿಕ್ಕರ್ ಅವರಿಗೆ ರಕ್ಷಣಾ ಹೊಣೆ ವಹಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಕೇಂದ್ರ ಸಚಿವರಾಗಿ ಬಡ್ತಿ ನೀಡುವ ಸೂಚನೆಯೆಂಬಂತೆ ಮೋದಿ ಅವರು ಪರಿಕ್ಕರ್ ಅವರನ್ನು ಬುಧವಾರ ದಿಢೀರ್ ದೆಹಲಿಗೆ ಕರೆಸಿಕೊಂಡಿದ್ದಾರೆ. ಮೋದಿ ಜತಗೆ ಮಾತುಕತೆಗೂ ಮುನ್ನ ಪರಿಕ್ಕರ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆಗೂ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಗೋವಾದಲ್ಲಿ ಮುಂದಿನ ಉತ್ತರಾಧಿಕಾರಿ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪರಿಕ್ಕರ್ ಸ್ಪಷ್ಟ ಉತ್ತರ ನೀಡಲಿಲ್ಲ, ಮೋದಿ ಭೇಟಿ ಬಗ್ಗೆ ಆಮೇಲೆ ಉತ್ತರಿಸುತ್ತೇನೆ. ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿರುವುದು ನಿಜ. ಆದರೆ, ವಿವರ ಸದ್ಯಕ್ಕೆ ಬಹಿರಂಗಗೊಳಿಸಲಾರೆ ಎಂದಷ್ಟೇ ಹೇಳಿದ್ದಾರೆ. ರಕ್ಷಣಾ ಸಚಿವರಾಗುತ್ತಿದ್ದೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೂ ಹೌದು ಅಥವಾ ಇಲ್ಲ ಎಂದು ಹೇಳದೇ ನುಣುಚಿಕೊಂಡಿದ್ದಾರೆ.
ಮನೋಹರ್ ಪರಿಕ್ಕರ್, ಜಯಂತ್ ಸಿನ್ಹಾ, ಹಂಸರಾಜ್ ಅಹಿರ್, ಮುಕ್ತಾರ್ ಅಬ್ಬಾಸ್ ನಖ್ವಿ, ರಾಜೀವ್ ಪ್ರತಾಪ್ ರೂಢಿ ಸೇರಿದಂತೆ ಇನ್ನೂ ಏಳು ಮಂದಿಗೆ ಸಂಪುಟದಲ್ಲಿ ಸ್ಥಾನಸಿಗಬಹುದು ಎಂಬ ಲೆಕ್ಕಾಚಾರವಿದೆ. ಪ್ರಸ್ತುತ ಸಂಪುಟದಲ್ಲಿ ರಾಜ್ಯ ಸಚಿವರಾಗಿರುವ ಪ್ರಕಾಶ್ ಜವೇಡಕರ್ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ.
Advertisement