ಸಂಬಳ ಕೇಳಿದ್ದಕ್ಕೆ ದಂಪತಿಗಳನ್ನೇ ಜೀವಂತ ಸುಟ್ಟ ಪಾ(ಪಿ)ಕಿಗಳು..!

ಕೆಲಸ ಮಾಡಿ ಸಂಬಳ ಕೇಳಿದ್ದಕ್ಕೇ ಕ್ರಿಶ್ಚಿಯನ್ ದಂಪತಿಯನ್ನು ಜೀವಂತವಾಗಿ ಸುಟ್ಟ ಕ್ರೂರ ಘಟನೆ ನೆರೆಯ ಪಾಕಿಸ್ತಾನದಲ್ಲಿ ನಡೆದಿದೆ.
ಮೊಬೈಲ್‌ನಲ್ಲಿ ಸೆರೆಯಾದ ಯುವ ದಂಪತಿಗಳನ್ನು ಜೀವಂತವಾಗಿ ಸುಟ್ಟ ದೃಶ್ಯ-ಚಿತ್ರಕೃಪೆ: ಯೂರೋಪಿಯನ್ ಪ್ರೆಸ್‌ಫೋಟೋ ಏಜೆನ್ಸಿ
ಮೊಬೈಲ್‌ನಲ್ಲಿ ಸೆರೆಯಾದ ಯುವ ದಂಪತಿಗಳನ್ನು ಜೀವಂತವಾಗಿ ಸುಟ್ಟ ದೃಶ್ಯ-ಚಿತ್ರಕೃಪೆ: ಯೂರೋಪಿಯನ್ ಪ್ರೆಸ್‌ಫೋಟೋ ಏಜೆನ್ಸಿ

ಲಾಹೋರ್: ಕೆಲಸ ಮಾಡಿ ಸಂಬಳ ಕೇಳಿದ್ದಕ್ಕೇ ಕ್ರಿಶ್ಚಿಯನ್ ದಂಪತಿಯನ್ನು ಜೀವಂತವಾಗಿ ಸುಟ್ಟ ಕ್ರೂರ ಘಟನೆ ನೆರೆಯ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನದ ಲಾಹೋರ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕಸೂರ್ ಜಿಲ್ಲೆಯ ಕೋಟ್ ರಾಧಾ ಕಿಶನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ದಂಪತಿ ಮೇಲೆ ಖುರಾನ್ ಹಾಳೆ ಹರಿದು ಹಾಕಿದ ಆರೋಪ ಹೊರಿಸಿ ಸುಟ್ಟು ಹಾಕಲಾಗಿದೆ. ಶಾಹ್‌ಬಾಝ್ ಮಸೀಹ್ (26) ಮತ್ತು ಆತನ ಪತ್ನಿ ಶಮಾ ಬೀಬಿ (24) ವರ್ಷ ಎಂಬುವವರನ್ನು ನಡುಬೀದಿಯಲ್ಲೇ ಸುಟ್ಟು ಹಾಕಲಾಗಿದೆ. ಘಟನೆ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದೆಲ್ಲೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೆ ಘಟನೆ ಸಂಬಂಧ ಗ್ರಾಮದ 50 ಮಂದಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಘಟನೆ?
ಶಾಹ್‌ಬಾಝ್ ಮಸೀಹ್ ಮತ್ತು ಶಮಾಬೀಬಿ ದಂಪತಿ ಮೂಲತಃ ಕ್ರಿಶ್ಚಿಯನ್ ಧರ್ಮದವರಾಗಿದ್ದು, ಕೋಟ್ ರಾಧಾ ಕಿಶನ್ ಗ್ರಾಮದಲ್ಲಿನ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯ ಮಾಲೀಕ ಮಹಮದ್ ಅಫ್ಜಲ್ ಕಳೆದ ಕೆಲ ತಿಂಗಳಿಂದ ಇವರಿಗೆ ಸಂಬಳ ನೀಡಿದೇ ಸತಾಯಿಸುತ್ತಿದ್ದ. ಹೀಗಾಗಿ ಈ ದಂಪತಿ ಕೆಲಸ ಬಿಡಲು ನಿರ್ಧರಿಸಿ ತಾವು ಮಾಡಿದ ಕೆಲಸಕ್ಕಾಗಿ ಸಂಬಳ ನೀಡುವಂತೆ ಅಫ್ಜಲ್ ಬಳಿ ಒತ್ತಾಯಿಸಿದಾಗ ಆತ ದಂಪತಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಅಲ್ಲದೆ ದಂಪತಿಗಳೇ ತನಗೆ 5 ಲಕ್ಷ ಹಣ ನೀಡಬೇಕು ಎಂದು ಹೇಳಿ ತನ್ನ ಇತರೆ ನೌಕರರನ್ನು ಬಳಸಿಕೊಂಡು ಈ ದಂಪತಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ.

ಸತತ 2 ದಿನಗಳ ಕಾಲ ದಂಪತಿಗೆ ಅನ್ನ ನೀರು ಕೊಡದೆ ಅಫ್ಜಲ್ ಕೊಠಡಿಯಲ್ಲಿಯೇ ಕೂಡಿ ಹಾಕಿದ್ದ. ಇದನ್ನು ಸ್ಥಳೀಯರು ವಿಚಾರಿಸಿದಾಗ ದಂಪತಿ ಮೇಲೆ ಮುಸ್ಲಿಮರ ಪವಿತ್ರ ಖುರಾನ್ ಅನ್ನು ಸುಟ್ಟು ಹಾಕಿದ ಆರೋಪ ಹೊರಿಸುತ್ತಾನೆ. ನಾನು ಕೋಣೆಗೆ ಹೋದಾಗ ಕೊಣೆಯಲ್ಲಿ ಖುರಾನ್‌ನ ಸುಟ್ಟುಹೋಗಿದ್ದ ಹಾಳೆಗಳನ್ನು ನೋಡಿದೆ. ಅದನ್ನು ಶಮಾ ಯಾರಿಗೂ ಕಾಣದಿರಲಿ ಎಂದು ಗುಡಿಸಿ ಹೊರಗೆ ಸಾಗಿಸಲು ಯತ್ನಿಸುತ್ತಿದ್ದಳು ಎಂದು ಆರೋಪಿಸುತ್ತಾನೆ.

ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ಧಾರ್ಮಿಕ ಮುಖಂಡರು ಅಫ್ಜಲ್ ಮಾತನ್ನೇ ನಿಜವೆಂದು ನಂಬಿ, ಆರೋಪದ ಕುರಿತಂತೆ ದಂಪತಿಯನ್ನು ಒಮ್ಮೆಯೂ ವಿಚಾರಿಸದೇ ದಂಪತಿಯ ವಿರುದ್ಧ ಸಾವಿನ ಫರ್ಮಾನು ಹೊರಡಿಸುತ್ತಾರೆ. ಬಳಿಕ ಕೋಣೆಯ ಬಳಿ ಸೇರಿದ ನೂರಾರು ಮಂದಿ ದಂಪತಿಗಳನ್ನು ಮನಬಂದಂತೆ ಥಳಿಸಿ ನಡು ಬೀದಿಯಲ್ಲಿಯೇ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರಾದರೂ ಅಷ್ಟು ಹೊತ್ತಿಗಾಗಲೇ ಆ ಯುವ ದಂಪತಿಗಳ ದೇಹ ಸುಟ್ಟು ಕರಕಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಗ್ರಾಮದ ಧಾರ್ಮಿಕ ಮುಖಂಡರು ಸೇರಿದಂತೆ 50 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಸ್ಥಳೀಯ ಕ್ರಿಶ್ಚಿಯನ್ ಮಿಶನರಿಗಳು ಪ್ರತಿಭಟನೆ ನಡೆಸುತ್ತಿದ್ದು, ಗ್ರಾಮದಲ್ಲಿ ಇದೀಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com