
ಮುಂಬೈ: ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬಳು ಶೌಚಾಲಯಕ್ಕಾಗಿ ತನ್ನ ತಾಳಿಯನ್ನೇ ಮಾರುವ ಮೂಲಕ ದಿಟ್ಟತನ ಪ್ರದರ್ಶನ ಮಾಡಿದ್ದು, ಮಹಿಳೆಯ ಕಾರ್ಯವನ್ನು ಶ್ಲಾಘಿಸಿರುವ ಮಹಾ ಸರ್ಕಾರ ಆಕೆಯನ್ನು ಪ್ರಶಂಸಿದೆ.
ಮೂಲತಃ ಮಹಾರಾಷ್ಟ್ರದ ವಾಹಿಮ್ ಜಿಲ್ಲೆಯ ಸಾಯಿಖೇಡಾ ಗ್ರಾಮದ ಮೂಲದವರಾದ ಸಂಗೀತಾ ಅವಾಳೆ ಎಂಬಾಕೆ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ತನ್ನ ತಾಳಿಯನ್ನೇ ಮಾರಾಟ ಮಾಡಿದ್ದಾರೆ. ಈ ವಿಚಾರ ಮಹಾರಾಷ್ಟ್ರದ ಗ್ರಾಮಾಂತರ ಅಭಿವೃದ್ಧಿ ಇಲಾಖೆ ಸಚಿವೆ ಪಂಕಜಾ ಮುಂಡೆ ಅವರಿಗೆ ತಿಳಿದಿದ್ದು, ಕೂಡಲೇ ಆಕೆಯನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಸತ್ಕರಿಸಿದ್ದಾರೆ. ಅಲ್ಲದೇ ಆಕೆಯ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
'ಶೌಚಾಲಯ ದೇಶದ ಪ್ರತಿಯೊಬ್ಬ ನಾಗರೀಕನ ಮೂಲಭೂತ ಅವಶ್ಯಕತೆಯಾಗಿದ್ದು, ಅದನ್ನು ಹೊಂದುವುದು ಎಲ್ಲರ ಹಕ್ಕಾಗಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಇಂದಿಗೂ ಶೌಚಾಲಯಗಳ ಸಮರ್ಪಕ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ಮಾಣ ಮಾಡಲೇಬೇಕು ಎಂದು ಮಹಿಳೆ ತನ್ನ ತಾಳಿಯನ್ನೇ ಮಾರಾಟ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಹೀಗಾಗಿ ಆಕೆಯನ್ನು ಸರ್ಕಾರದ ವತಿಯಿಂದ ಸತ್ಕರಿಸಿದ್ದೇವೆ' ಎಂದು ಪಂಕಜಾ ಅವರು ಹೇಳಿದ್ದಾರೆ.
ಅಂತೆಯೇ ಜನಪ್ರತಿನಿಧಿಯಾಗಿ ಸೇವೆಸಲ್ಲಿಸಲು ನನಗೊಂದು ಅವಕಾಶ ಒದಗಿಬಂದಿದ್ದು, ನಾನು ನನ್ನ ಪಾಲಿನ ಶಾಸಕರ ನಿಧಿಯಿಂದ ಶೇ.25ರಷ್ಟು ಹಣವನ್ನು ನನ್ನ ಕ್ಷೇತ್ರದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಮೀಸಲಿಡುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚೆಚ್ಚು ಶೌಚಾಲಯಗಳ ನಿರ್ಮಾಣ ಮಾಡುವತ್ತ ಹೆಚ್ಚು ಒತ್ತು ನೀಡುತ್ತೇನೆ. ಆ ಮೂಲಕ ಶೌಚಾಲಯವಿಲ್ಲದೆ ಮಹಿಳೆಯರ ಎದುರಿಸುತ್ತಿರುವ ಅನಾನುಕೂಲವನ್ನು ನಿವಾರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಹಿಳೆ ಸಂಗೀತಾ, ಶೌಚಾಲಯ ಪ್ರತಿಯೊಬ್ಬ ನಾಗರೀಕನ ಮೂಲಭೂತ ಅವಶ್ಯಕತೆಯಾಗಿದೆ. ತಾಳಿಗಿಂತ ಶೌಚಾಲಯವೇ ಅಮೂಲ್ಯವೆನಿಸಿತು. ಹೀಗಾಗಿ ನಾನು ನನ್ನ ತಾಳಿಯನ್ನು ಮಾರಿ ಶೌಚಾಲಯ ನಿರ್ಮಿಸಿಕೊಂಡಿದ್ದೇನೆ ಎಂದು ಹೇಳಿದರು.
ಸಂಗೀತಾಗೆ ಮತ್ತೆ 'ತಾಳಿ' ಭಾಗ್ಯ
ಇನ್ನು ಶೌಚಾಲಯ ನಿರ್ಮಾಣಕ್ಕಾಗಿ ತನ್ನ ತಾಳಿಯನ್ನೇ ಮಾರಿ ದಿಟ್ಟತನ ಪ್ರದರ್ಶನ ಮಾಡಿದ್ದ ಮಹಿಳೆ ಸಂಗೀತಾರನ್ನು ಮಹಾರಾಷ್ಟ್ರ ಸರ್ಕಾರ ಸತ್ಕರಿಸಿದ್ದು, ಗ್ರಾಮಾಂತರ ಅಭಿವೃದ್ಧಿ ಇಲಾಖೆ ಸಚಿವೆ ಪಂಕಜಾ ಮುಂಡೆ ಅವರ ವತಿಯಿಂದ ಮಹಿಳೆಗೆ ಚಿನ್ನದ ತಾಳಿಯನ್ನು ಉಡುಗೊರೆಯಾಗಿ ನೀಡಿದೆ.
ಒಟ್ಟಾರೆ ಶೌಚಾಲಯ ನಿರ್ಮಾಣಕ್ಕಾಗಿ ತನ್ನ ತಾಳಿಯನ್ನೇ ಮಾರಿ ಪರೋಕ್ಷವಾಗಿ ತಾಳಿಗಿಂತ ಶೌಚಾಲಯ ಮುಖ್ಯ ಎಂಬ ಸಂದೇಶ ಸಾರುವ ಮೂಲಕ ಇಡೀ ದೇಶದ ಮಹಿಳೆಯರಿಗೆ ಸಂಗೀತಾ ಅವಾಳೆ ಮಾದರಿಯಾಗಿದ್ದಾರೆ.
Advertisement