
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯ ಗೆಳೆಯ ಆರ್ ಎಸ್ಎಸ್ ಪ್ರಚಾರಕ ಬಾಬಾ ವಿಶ್ವನಾಥ (68) ಅನಾರೋಗ್ಯದಿಂದ ನಿಧನರಾದರು. ಅವರು 1984ರಿಂದ 92ರವರೆಗೆ ಪಂಜಾಬ್ನ ಚಂಡೀಗಡದ 18 ಸೆಕ್ಟರ್ ಮಾಧವ ನಿವಾಸದಲ್ಲಿ ಮೋದಿ ಜತೆ ಸಂಘ ಪ್ರಚಾಕರವಾಗಿ ಕೆಲಸ ಮಾಡಿದ್ದರು.
ಪಂಜಾಬ್, ಹರ್ಯಾಣ, ಹಿಮಾಚಲ ರಾಜ್ಯ.ಗಳ ಮೇಲುಸ್ತುವಾರಿ ನೋಡುತ್ತಿದ್ದರು. ಮೋದಿ ಜತೆ ಒಂದೇ ಕೋಣೆಯಲ್ಲಿ ನಾಲ್ಕು ಮಂದಿಯೊಂದಿಗೆ ವಾಸ್ತವ್ಯ ಹೂಡಿದ್ದರು. ಸೈಕಲ್ ನಂತರ ಕೆಲವು ವರ್ಷಗಳ ಕಾಲ ಸೆಕೆಂಡ್ ಹ್ಯಾಂಡ್ ಸ್ಕೂಟರ್ನಲ್ಲಿ ಮೋದಿ ಹಿಂದೆ ಕುಳಿತು ಊರೂರು ಸುತ್ತಿದ್ದರು.
ಆ ನಂತರ ಮೋದಿ ಗುಜರಾತ್ ಮುಖ್ಯಮಂತ್ರಿಯಾದರು, ವಿಶ್ವನಾಥ ಕಾಮತ್ ಅಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ ಮಂಗಳೂರಿಗೆ ವಾಪಸ್ ಆಗಿದ್ದರು. ಸಿಖ್ ಮತ್ತು ಹಿಂದೂಗಳ ನಡುವೆ ಇದ್ದ ದ್ವೇಷವನ್ನು ಶಮನಗೊಳಿಸುವ ಕೆಲಸದಲ್ಲಿ ವಿಶ್ವನಾಥ್ ಕೆಲಸ ಮಾಡಿದ್ದರು. ಇದೇ ಕಾರಣಕ್ಕೆ ಉದ್ದನೆ ಗಡ್ಡ ಬಿಡುತ್ತಿದ್ದರು. ಸಂಘದ ಪತ್ರಿಕೆಗಳಿಗೆ ದೇಣಿಗೆ ಸಂಗ್ರಹಿಸುತ್ತಿದ್ದ ವಿಶ್ವನಾಥ್, ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು.
ಪಂಜಾಬ್ನಲ್ಲಿ ಇದ್ದುದರಿಂದ ಇವರಿಗೆ ಪಂಜಾಬ್ ವಿಶ್ವನಾಥ್ ಎಂಬ ಹೆಸರು ಕೂಡಾ ಬಂದಿತ್ತು. ನಾಲ್ಕು ದಿನ ಕೋಮಾದಲ್ಲಿದ್ದರು: ಡಯಾಬಿಟೀಸ್ ನಿಂದ ಬಳಲುತ್ತಿದ್ದ ವಿಶ್ವನಾಥ್, ಎರಡುವರೆ ವರ್ಷದ ಹಿಂದೆ ಪಾರ್ಶ್ವವಾಯು ಪೀಡಿತರಾಗಿದ್ದರು. 6 ತಿಂಗಳ ಹಿಂದೆ ಮೂತ್ರ ಪಿಂಡ ವೈಫಲ್ಯವೂ ಆಗಿತ್ತು. ಸತತ ನಾಲ್ಕು ದಿನ ಕೋಮಾದಲ್ಲಿದ್ದರು. ಪ್ರಜ್ಞೆಗೆ ಮರಳಿದರೂ ಆಗಾಗ ಕೋಮಾಕ್ಕೆ ಜಾರುತ್ತಿದ್ದರು.
ನರೇಂದ್ರ ಮೋದಿ ಪ್ರಧಾನಿ ಆಗುವುದನ್ನು ನೋಡಬೇಕು ಎಂದು ಹಿಂದೊಮ್ಮೆ ಕನ್ನಡಪ್ರಭ ಜತೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕೋಮಾದಿಂದ ಚೇತರಿಕೊಂಡು ಮೋದಿ ಭಾಷಣವನ್ನು ಇಡೀ ದಿನ ಕುಳಿತು ಆಸಕ್ತಿಯಿಂದ ಕೇಳಿದ್ದರು.
Advertisement