

ನವದೆಹಲಿ: ಕ್ಯಾನ್ಸರ್ಗೆ ಕಾರಣವಾಗಿರುವ ಜಗಿಯುವ ತಂಬಾಕು, ಹೊಗೆ ರಹಿತ ತಂಬಾಕು ಹಾಗೂ ಸುವಾಸಿತ ತಂಬಾಕು ನಿಷೇಧಿಸಲು ಕರ್ನಾಟಕ ಮುಂದಾಗಿದೆ. ಜತೆಗೆ, ಸಿಗರೇಟನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಲಾಗುತ್ತದೆ. ಆ ಸಂಬಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ದಪಡಿಸಿರುವ ಶಿಫಾರಸನ್ನು ರಾಜ್ಯ ಸಂಪುಟಕ್ಕೆ ಸಲ್ಲಿಸಲಾಗಿದೆ. ಬುಧವಾರ(ನ.12) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಕರ್ನಾಟಕದಲ್ಲಿ ವರ್ಷದ ಹಿಂದೆ ಗುಟ್ಕಾ ನಿಷೇಧಿಸಿದ ನಂತರ ಬೇರೆ ಬೇರೆ ರೂಪದಲ್ಲಿ ಗುಟ್ಕಾವನ್ನು ಮಾರಾಟ ಮಾಡಲಾಗುತ್ತಿದೆ. ಕ್ಯಾನ್ಸರ್ಕಾರಕ ಅಂಶಗಳನ್ನೊಳಗೊಂಡ ವಸ್ತುಗಳನ್ನು ಜಗಿಯುವ ತಂಬಾಕಿನ ರೂಪದಲ್ಲಿ ದೊರೆಯುತ್ತಿವೆ.
ಗುಟ್ಕಾ ನಿಷೆಧದ ಪೂರ್ಣ ಫಲಿತಾಂಶ ಲಭ್ಯವಾಗಬೇಕಾದರೆ ರ್ಪ್ರಾತಕಾರಿಯಾದ ಜಗಿಯುವ ತಂಬಾಕು ನಿಷೇಧಿಸುವ ಅಗತ್ಯವಿದೆ ಎಂದು ಮನಗಂಡಿರುವ ಆರೋಗ್ಯ ಇಲಾಖೆ ಜಗಿಯುವ ತಂಬಾಕು ನಿಷೇಧಿಸಲು ಮುಂದಾಗಿದೆ.
ಖೈನಿ, ಜರ್ದಾ, ಖಾರಾ ಸೇರಿದಂತೆ ಹತ್ತಾರು ಬ್ರಾಂಡ್ಗಳ ಮೂಲಕ ಜಗಿಯುವ ತಂಬಾಕು ಪದಾರ್ಥಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ಜತೆಗೆ ಹೊಗೆರಹಿತ ತಂಬಾಕು ಮತ್ತು ಸುವಾಸಿತ ತಂಬಾಕು ವ್ಯಾಪಕವಾಗಿ ಹರಡುತ್ತಿದ್ದು, ಹೆಚ್ಚಾಗಿ ಯುವಕ ಯುವತಿಯರು ಈ ಪಿಡುಗಿಗೆ ಬಲಿಯಾಗುತ್ತಿದ್ದಾರೆ.
ಕೇಂದ್ರದ ಸೂಚನೆ
ಜಗಿಯುವ ತಂಬಾಕು ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವೂ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರು ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಪತ್ರವೊಂದನ್ನು ಬರೆದು ಜಗಿಯುವ ತಂಬಾಕು ನಿಷೇಧಿಸುವಂತೆ ಸೂಚಿಸಿದ್ದರು. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆಯ ನಿರ್ಧಾರಕ್ಕೆ ಈಗ ಕೇಂದ್ರ ಸರ್ಕಾರದ ಬೆಂಬಬಲವೂ ದಕ್ಕಿದಂತಾಗಿದೆ. ಈಗಾಗಲೇ ಬಿಹಾರ, ಮಹಾರಾಷ್ಟ್ರ, ಆಂಧ್ರ, ಪಶ್ಚಿಮ ಬಂಗಾಳದಲ್ಲಿ ಜಗಿಯುವ ತಂಬಾಕು ನಿಷೇಧಿಸಲಾಗಿದೆ.
ರಾಜ್ಯಗಳಲ್ಲಿ ನಿಷೆಧಿಸುವ ಪ್ರಸ್ತಾಪ ಇದೆ. ಹೀಗಾಗಿ ಪ್ರಬಲ ಲಾಭಿ ಇದ್ದರೂ ರಾಜ್ಯ ಸಂಪುಟ ಸಭೆ ಜಗಿಯುವ ತಂಬಾಕು ನಿಷೇಧಿಸಲು ಒಪ್ಪಿಗೆ ನೀಡುವುದು ಅನಿವಾರ್ಯ ಎನ್ನಲಾಗಿದೆ.
ಬಿಡಿ ಸಿಗರೇಟು ನಿಷೇಧ
ಮಕ್ಕಳು ಧೂಮಪಾನಕ್ಕೆ ದಾಸರಾಗವುದನ್ನು ತಡೆಗಟ್ಟುವ ಸಲುವಾಗಿ ಸಿಗರೇಟನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವುದಕ್ಕೆ ನಿಷೇಧ ಹೇರಲಾಗುತ್ತದೆ. ನಿಷೇಧ ಜಾರಿ ನಂತರ ಪ್ಯಾಕ್ಗಳಲ್ಲಿ ಮಾತ್ರ ಸಿಗರೇಟು ಮಾರಾಟ ಮಾಡಲು ಅವಕಾಶ ಇದೆ. ಬಿಡಿಬಿಡಿಯಾಗಿ ಮಾರಾಟ ಮಾಡಿದರೆ ದಂಡ ಮತ್ತು ಶಿಕ್ಷೆ ವಿಧಿಸುವ ಪ್ರಸ್ತಾಪ ಇದೆ. ಇಡೀ ಪ್ಯಾಕ್ ಖರೀದಿಸುವುದು ಮಕ್ಕಳಿಗೆ ಸಾಧ್ಯವಾಗುವುದಿಲ್ಲ.ಅಷ್ಟರಮಟ್ಟಿಗೆ ಮಕ್ಕಳು ಧೂಮಪಾನ ಚಟಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು ಎಂದು ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾಪದಲ್ಲಿ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ. ಇಡೀ ಏಷ್ಯಾದಲ್ಲಿಯೇ ಬಿಡಿ ಬಿಡಿ ಸಿಗರೇಟು ಮಾರಾಟ ನಿಷೇಧ ಜಾರಿಗೆ ಮುಂದಾಗಿರುವ ರಾಜ್ಯ ಕರ್ನಾಟಕ.
ಸಂಶೋಧನಾ ವರದಿ ಆಧಾರ
ಜಗಿಯುವ ತಂಬಾಕಿನಿಂದ ಕ್ಯಾನ್ಸರ್ ಪೀಡಿತರಾದವರ ಪೈಕಿ ಶೇ.30ರಷ್ಟು ಮಂದಿ ಭಾರತದಲ್ಲಿ ಇದ್ದಾರೆ ಎಂದು ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಸಿಆರ್) ತನ್ನ ವರದಿಯಲ್ಲಿ ತಿಳಿಸಿದೆ. ಜಗಿಯುವ ತಂಬಾಕು ಅತಿ ಅಪಾಯಕಾರಿ.
ಸಿಗರೇಟಿಗಿಂತಲೂ ಜಗಿಯುವ ತಂಬಾಕು ಸೇವಿಸುವವರಲ್ಲಿ ಕ್ಯಾನ್ಸರ್ ತ್ವರಿತವಾಗಿ ಹರಡುತ್ತದೆ ಎಂದು ವರದಿಯಲ್ಲಿ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್ಒ) ಅಧೀನದಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ಗ್ಲೋಬೊಕಾನ್ ಸಂಸ್ಥೆಯೂ ಸಹ ತನ್ನ ವರದಿಯಲ್ಲಿ ಈ ಅಂಶಗಳನ್ನು ಪುಷ್ಟೀಕರಿಸಿದೆ.
ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಈ ವರದಿಗಳ ವಿವರ ನೀಡಲಾಗಿದೆ. ಗುಟ್ಕಾ ನಿಷೇಧದಿದ ಬಾಯಿ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ವರದಿಯಲ್ಲಿ ತಿಳಿಸಲಾಗಿದೆ. ಜಗಿಯುವ ತಂಬಾಕು ನಿಷೇಧಿಸಿದ ನಂತರ ಬಾಯಿ, ಗಂಟಲು ಕ್ಯಾನ್ಸರ್ ಪೀಡಿತ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಲಿದೆ ಎಂದು ವಿವರಿಸಲಾಗಿದೆ.