
ಬೆಂಗಳೂರು: ವಿಮಾನ ಸ್ಫೋಟಿಸುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ವ್ಯವಸ್ಥಾಪಕರ ಮೊಬೈಲ್ ಫೋನ್ಗೆ ಸಂದೇಶ ಕಳುಹಿಸಿದ ಆರೋಪದ ಮೇಲೆ ಚನ್ನಪಟ್ಟಣ ಮೂಲದ ಮೂವರು ಯುವಕರನ್ನು ಏರ್ಪೋರ್ಟ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಚನ್ನಪಟ್ಟಣ ಚಕ್ಕೆರಿ ಬಳಿಯ ಗಂಗೆದೊಡ್ಡಿ ಗ್ರಾಮದ ಶಿವಾನಂದ (27), ಈತನ ಚಿಕ್ಕಪ್ಪ ನಿಂಗೇಗೌಡ (47) ಮತ್ತು ಮೊಬೈಲ್ ಅಂಗಡಿ ಮಾಲೀಕ ಯೋಗೇಶ್ (30) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ವಿಕಾಸ್ಕುಮಾರ್ ತಿಳಿಸಿದರು.
ಏರೋಪ್ಲೇನ್ ಬ್ಲಾಸ್ಟಿಂಗ್ ಟುಮಾರೋಗ
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ವಿನಮ್ರ ಮಲ್ಹೋತ್ರ ಎಂಬುವರಿಗೆ ಅನಾಮಧೇಯ ಮೊಬೈಲ್ ಸಂಖ್ಯೆಯಿಂದ ಸಂದೇಶ ಬಂದಿತ್ತು.
ಅದರಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ವಿಮಾನವನ್ನು ಸ್ಪೋಟಿಸಲಾಗುತ್ತದೆ.ಏರೋಪ್ಲೇನ್ ಬ್ಲಾಸ್ಟಿಂಗ್ ಟುಮಾರೋ 11.30 ಎ.ಎಂ' ಎನ್ನು ಸಂದೇಶ ಇತ್ತು. ಕೂಡಲೇ ಅವರು 'ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ'ಗೆ ಮಾಹಿತಿ ನೀಡಿದ್ದರು. ಬಾಂಬ್ ಬೆದರಿಕೆ ಸಂದೇಶದಿಂದ ಅಲರ್ಟ್ ಆದ ಅಧಿಕಾರಿಗಳು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಡರಾತ್ರಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ನಂಬರ್ನ ವಿಳಾಸ ನೋಡಿದಾಗ ಅದು ಚನ್ನಪಟ್ಟಣ ತಾಲೂಕು ಚಿಕ್ಕೇರಿ ಗ್ರಾಮದ ಸಮೀಪದ ಗಂಗೆದೊಡ್ಡಿ ಗ್ರಾಮದಿಂದ ಬಂದಿರುವುದು ತಿಳಿದು ಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಚನ್ನಪಟ್ಟಣ ಪೊಲೀಸರ ಸಹಾಯದೊಂದಿಗೆ ಗ್ರಾಮಕ್ಕೆ ಧಾವಿಸಿ ನಿಂಗೇಗೌಡ ಹಾಗೂ ಶಿವಾನಂದ ಎಂಬುವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.
ವ್ಯವಸ್ಥಾಪಕರ ಮೊಬೈಲ್ಗೆ ಯಾವುದೇ ಸಂದೇಶ ಕಳುಹಿಸಿಲ್ಲ. ಸಂದೇಶ ರವಾನೆಯಾಗಿರುವ ನಂಬರ್ನ ಸಿಮ್ನ್ನು ನನ್ನ ವಿಳಾಸದಲ್ಲಿ ಯಾರಿಗೂ ಕೊಡಿಸಿಲ್ಲ, ಅಲ್ಲದೇ ನನ್ನ ಬರಳಿ ಆ ಸಿಮ್ ಇಲ್ಲ ಎಂದು ನಿಂಗೇಗೌಡ ವಿಚಾರಣೆ ವೇಳೆ ಹೇಲಿದ್ದ. ಆದರೆ, ಶಿವಾನಂದನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.
ನಿಂಗೇಗೌಡ ಗುತ್ತಿಗೆದಾರರಾಗಿದ್ದಾರೆ. ಶಿವಾನಂದನಿಗೆ 7 ತಿಂಗಳ ಹಿಂದೆ ಮದುವೆಯಾಗಿದ್ದು, ಆತ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ.
ಇತ್ತೀಚೆಗೆ ಕೌಟುಂಬಿಕ ವಿಚಾರಕ್ಕೆ ಗಲಾಟೆಯಾಗಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ನಿಂಗೇಗೌಡನ ಹೆಸರಲ್ಲಿ ಸಿಮ್ ಪಡೆದು ಮೆಸೇಜ್ ಕಳುಹಿಸಿದ್ದಾಗಿ ಶಿವಾನಂದ ಹೇಳಿಕೆ ನೀಡಿದ್ದಾನೆ. ಶಿವಾನಂದನಿಗೆ ಸಿಮ್ ಕೊಟ್ಟಿದ್ದನ್ನು ಯೋಗೇಶ್ ಸಹ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಭದ್ರತಾ ಕ್ರಮ
ಬಾಂಬ್ ಬೆದರಿಕೆ ಸಂದೇಶ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿ ಪರಿಶೀಲನೆ ನಡೆಸಿದಾಗ ಇದು ಹುಸಿ ಸಂದೇಶ ಎನ್ನುವುದು ಗೊತ್ತಾಗಿದೆ.
ಆದರೆ, ಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದ ಎಲ್ಲಾ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಐಎಎಲ್ ಸಾರ್ವಜನಿಕರ ಸಂಪರ್ಕಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಸ್ಪಿಗೆ ಮಿಸ್ಡ್ ಕಾಲ್
ವಿಮಾನ ನಿಲ್ದಾಣ ಮ್ಯಾನೇಜರ್ಗೆ ಬೆದರಿಕೆ ಸಂದೇಶ ಕಳುಹಿಸಿದ ಬಳಿಕ ರಾಮನಗರ ಎಸ್ಪಿ ಅವರ ಮೊಬೈಲ್ ಫೋನ್ಗೂ ಮಿಸ್ಡ್ ಕಾಲ್ ನೀಡಿದ್ದ. ಅಲ್ಲದೇ ನಿಂಗೇಗೌಡನ ಸಂಬಂಧಿಗಳು, ಸ್ನೇಹಿತರಿಗೂ ಕರೆ ಮಾಡಿ ಮಾತನಾಡಿದ್ದ. 15 ದಿನದ ಹಿಂದೆಯೂ ನಿಂಗೇಗೌಡನ ಹೆಸರಿನಲ್ಲಿ ಯುವತಿಯೊಬ್ಬರಿಗೆ ಕರೆ ಮಾಡಿ ಮಾತನಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement