ಉಗ್ರನ ವಿಚಾರಣೆ ವೇಳೆಯೇ ಎನ್‌ಐಎ ಕಚೇರಿ ಬಳಿ ಸ್ಫೋಟ

ಶನಿವಾರ ಬಂಧನಕ್ಕೀಡಾಗಿದ್ದ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದ ವೇಳೆಯಲ್ಲಿಯೇ ಕಚೇರಿಯ ಹೊರಭಾಗದಲ್ಲಿ ಬಾಂಬ್ ಸ್ಫೋಟಗೊಂಡಿದೆ.
ಎನ್‌ಐಎ-ರಾಷ್ಟ್ರೀಯ ತನಿಖಾ ದಳ
ಎನ್‌ಐಎ-ರಾಷ್ಟ್ರೀಯ ತನಿಖಾ ದಳ

ಕೊಲ್ಕತಾ: ಶನಿವಾರ ಬಂಧನಕ್ಕೀಡಾಗಿದ್ದ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದ ವೇಳೆಯಲ್ಲಿಯೇ ಕಚೇರಿಯ ಹೊರಭಾಗದಲ್ಲಿ ಬಾಂಬ್ ಸ್ಫೋಟಗೊಂಡಿದೆ.

ಕೊಲ್ಕತಾದ ಎನ್‌ಐಎ ಕಚೇರಿ ಬಳಿ ಈ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ಬುರ್ದ್ವಾನ್ ಸ್ಫೋಟ ಪ್ರಕರಣ ಸಂಬಂಧ ಶನಿವಾರ ಬಂಧನಕ್ಕೀಡಾಗಿದ್ದ ಸ್ಫೋಟದ ರೂವಾರಿ ಸಾಜಿದ್ ಖಾನ್‌ನನ್ನು ವಿಚಾರಣೆಗೆ ಒಳಪಡಿಸುವ ವೇಳೆ ಬಾಂಬ್ ಅನ್ನು ಸ್ಫೋಟಗೊಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಎನ್‌ಐಎ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಉಗ್ರನ ಪರಾರಿ ಉಪಾಯವಾಗಿರಬಹುದೇ?
ಪ್ರಸ್ತುತ ಎನ್‌ಐಎ ಕಚೇರಿ ಬಳಿ ಅನಾಮಧೇಯರು ಸ್ಫೋಟಿಸಿರುವ ಬಾಂಬ್ ಕಡಿಮೆ ತೀವ್ರತೆಯದ್ದೇ ಆದರೂ ಬಾಂಬ್ ಸ್ಫೋಟದ ಹಿನ್ನೆಲೆಯನ್ನು ಅಧಿಕಾರಿಗಳು ಶಂಕಿಸಿದ್ದಾರೆ. ಶನಿವಾರ ಬುರ್ದ್ವಾನ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಸಾಜಿದ್ ಖಾನ್ ಬಂಧನದ ಬಳಿಕ ಪಶ್ಚಿಮ ಬಂಗಾಳದಲ್ಲಿ ಕೆಲ ಭೂಗತ ಚಟುವಟಿಕೆಗಳು ಹೆಚ್ಚಾಗಿದ್ದು, ಪ್ರಸಕ್ತ ಬಾಂಬ್ ಸ್ಫೋಟ ಕೂಡ ಇಂತಹುದೇ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

ಸಾಜಿದ್‌ನನ್ನು ವಿಚಾರಣೆಗೆ ಒಳಪಡಿಸುತ್ತಿರುವ ಎನ್‌ಐಎ ಕಚೇರಿ ಬಳಿಯಲ್ಲಿಯೇ ಬಾಂಬ್ ಸ್ಫೋಟಗೊಳಿಸುವ ಮೂಲಕ ಅಧಿಕಾರಿಗಳ ದಿಕ್ಕು ತಪ್ಪಿಸಿ ಆತನನ್ನು ಪರಾರಿ ಮಾಡಲು ಉಗ್ರರ ಗುಂಪು ಯತ್ನಿಸಿರಬಹುದೇ ಅಥವಾ ಎಲ್ಲಿ ಆತ ಬಾಯಿ ಬಿಡುತ್ತಾನೆ ಎಂಬ ಭಯದಿಂದ ಆತನನ್ನೇ ಮುಗಿಸಿ ಬಿಡುವ ಹುನ್ನಾರವಾಗಿತ್ತೆ ಎಂಬಿತ್ಯಾದಿ ಅಂಶಗಳ ಕುರಿತು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com