ಬಿಜೆಪಿ ದೊಡ್ಡ ಪಕ್ಷ, ಶಿವಸೇನೆಯೊಂದಿಗೆ ತಾಳ್ಮೆ ಅಗತ್ಯ: ಸ್ವಾಮಿ

ಬಿಜೆಪಿಗೆ ತನ್ನ ಹಳೆಯ ಮೈತ್ರಿ ಪಕ್ಷ ಶಿವಸೇನೆಯೊಂದಿಗಿನ ವ್ಯವಹಾರದಲ್ಲಿ ಕೊಂಚ ತಾಳ್ಮೆ ಆಗತ್ಯ ಎಂದು ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ
ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದು, ತನ್ನ ಹಳೆಯ ಮೈತ್ರಿ ಪಕ್ಷ ಶಿವಸೇನೆಯೊಂದಿಗಿನ ವ್ಯವಹಾರದಲ್ಲಿ ಕೊಂಚ ತಾಳ್ಮೆ ಆಗತ್ಯ ಎಂದು ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಬಿಕ್ಕಟ್ಟು ಹಿನ್ನಲೆಯಲ್ಲಿ ನವದೆಹಲಿಯಲ್ಲಿ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ ಅವರು, 'ಶಿವಸೇನೆ ಬಿಜೆಪಿಯ ಹಳೆಯ ಮಿತ್ರ ಪಕ್ಷವಾಗಿದೆ. ಹೀಗಾಗಿ ಶಿವಸೇನೆ ಜೊತೆಗಿನ ವ್ಯವಹಾರದಲ್ಲಿ ಬಿಜೆಪಿ ಕೊಂಚ ತಾಳ್ಮೆ ವಹಿಸುವುದು ಅಗತ್ಯ' ಎಂದು ಹೇಳಿದ್ದಾರೆ. 'ಶಿವಸೇನೆಯೊಂದಿಗಿನ ಮೈತ್ರಿ ಉತ್ತಮ ರೀತಿಯಲ್ಲಿ ಸಾಗಲು ಬಿಜೆಪಿ ಕೊಂಚ ತಾಳ್ಮೆ ವಹಿಸುವ ಅಗತ್ಯತೆ ಇದ್ದು, ಬಿಕ್ಕಟ್ಟು ಶಮನಕ್ಕೆ ಬಿಜೆಪಿ ಪ್ರಯತ್ನಿಸಬೇಕಿದೆ. ಶಿವಸೇನೆ ಹಿಂದುತ್ವ ಆಧಾರಿತ ಪಕ್ಷವಾಗಿದ್ದು, ಕಳೆದ 25 ವರ್ಷಗಳಿಂದ ಬಿಜೆಪಿ ಜೊತೆ ಗುರುತಿಸಿಕೊಂಡಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಕೂಡ ತಾಳ್ಮೆ ಅಗತ್ಯ' ಎಂದು ಸ್ವಾಮಿ ಹೇಳಿದ್ದಾರೆ.

ಇನ್ನು ಉದ್ಧವ್ ಠಾಕ್ರೆ ಅವರ ಬಹಿರಂಗ ಹೇಳಿಕೆಗಳ ಕುರಿತು ಮಾತನಾಡಿದ ಸುಬ್ರಮಣಿಯನ್ ಸ್ವಾಮಿ ಅವರು, 'ಉದ್ಧವ್ ಠಾಕ್ರೆ ಅವರ ಮಾತಿಗೆ ನಾನು ಉತ್ತರಿಸುವುದಿಲ್ಲ. ಆದರೆ ಒಂದು ಮನೆಯಲ್ಲಿ ಮನೆಯವರ ನಡುವೆ ಜಗಳವೇರ್ಪಟ್ಟಾಗ ಸಾಮಾನ್ಯವಾಗಿ ಮಾತಿನ ಸಮರ ನಡೆಯುತ್ತದೆ. ನೀನು ಹಾಗೇ ಹೇಳಿದೆ, ನೀನು ಹೀಗೆ ಹೇಳಿದೆ ಎಂಬಿತ್ಯಾದಿ ಮಾತುಗಳು ಬರುತ್ತವೆ. ನಾವು ಈ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು' ಎಂದು ಹೇಳಿದರು.

ಇನ್ನು ಕೇಂದ್ರ ಸಂಪುಟ ಪುನಾರಚನೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮಿ ಅವರು, 'ಸಂಪುಟ ಪುನಾರಚನೆ ಮತ್ತು ಸಚಿವರಿಗೆ ಖಾತೆ ಹಂಚಿಕೆ ಮಾಡುವುದು ಪ್ರಧಾನಿಗಿರುವ ವಿಶೇಷ ಹಕ್ಕಾಗಿದೆ. ಸಂಪುಟದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರು ಇರಬಾರದು? ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು? ಯಾವ ಸಚಿವ ಯಾವ ಖಾತೆಯನ್ನು ನಿಭಾಯಿಸಬಲ್ಲರು ಎಂಬ ಜ್ಞಾನ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಇನ್ನು ಇದೀಗ ಚರ್ಚೆಗೆ ಗ್ರಾಸವಾಗಿರುವ ಎರಡು ಖಾತೆಗಳ ಮತ್ತು ನರೇಂದ್ರ ಮೋದಿ ಅವರು ಆ ಖಾತೆಗಳನ್ನು ನೀಡಿರುವವರ ಬಗ್ಗೆಯೂ ತಮಗೆ ಚೆನ್ನಾಗಿ ತಿಳಿದಿದೆ. ಡಾ.ಹರ್ಷ ವರ್ಧನ್ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ಸ್ವತಃ ವೈದ್ಯರಾಗಿರುವ ಹರ್ಷವರ್ಧನ್ ಅವರು ಆ ಇಲಾಖೆಯನ್ನು ಸಮರ್ಥವಾಗಿಯೇ ನಿಭಾಯಿಸಬಲ್ಲರು'.

'ಇನ್ನು ರೇಲ್ವೇ ಇಲಾಖೆ ನಿಭಾಯಿಸುತ್ತಿದ್ದ ಸದಾನಂದಗೌಡ ಅವರಿಗೆ ಕಾನೂನು ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ಸದಾನಂದಗೌಡ ಅವರು ಕಾನೂನು ಪದವೀದರರಾಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಖಾತೆ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ' ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ದೆಹಲಿ ವಿಧಾನಭೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸ್ವಾಮಿ, 'ದೆಹಲಿ ಚುನಾವಣೆಯನ್ನು ಗುರಿಯಲ್ಲಿಟ್ಟುಕೊಂಡು ಹರ್ಷವರ್ಧನ್ ಅವರ ಖಾತೆ ಬದಲಾವಣೆ ಮಾಡಿಲ್ಲ. ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದು ಬಿಜೆಪಿ ಸಂಸ್ಕೃತಿಯಲ್ಲ. ಹೀಗಾಗಿ ಇಂತಹ ಗೊಂದಲಗಳು ಮೂಡಿರಬಹುದು' ಎಂದು ಹೇಳಿದರು.

ಒಟ್ಟಾರೆ ತನ್ನ ಸತತ 25 ವರ್ಷಗಳ ಹಳೆಯ ಮಿತ್ರ ಶಿವಸೇನೆಯೊಂದಿಗಿನ ಮೈತ್ರಿ ಮುರಿವ ವಿಚಾರ ಬಿಜೆಪಿ ಪಕ್ಷದ ಕೆಲ ಮುಖಂಡರಲ್ಲೇ ಅಸಮಾಧಾನ ತಂದಿದ್ದು, ಪ್ರತಿಪಕ್ಷದಲ್ಲಿ ಕೂರಲು ಶಿವಸೇನೆಯೇ ನಿರ್ಧರಿಸಿದ್ದರೂ ಕೂಡ ಅದನ್ನು ಸಮಾಧಾನಗೊಳಿಸುವ ಪ್ರಕ್ರಿಯೆ ಬಿಜೆಪಿಯಿಂದ ಒಳಗೊಳಗೇ ನಡೆಯುತ್ತಿರುವ ಹಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com