'ಮಹಿಳೆಯರ ಸಾವು ದುರದೃಷ್ಟಕರ': ಪ್ರಧಾನಿ ಮೋದಿ ಟ್ವೀಟ್

ವೈದ್ಯಕೀಯ ಶಿಬಿರದಲ್ಲಿ ಸಂತಾನಹರಣ ಶಸ್ತ್ರಕ್ರಿಯೆ ವೇಳೆ ಸಂಭವಿಸಿದ ಮಹಿಳೆಯರ ಸಾವಿನ ಪ್ರಕರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತನಿಖೆಗೆ ಆದೇಶಿಸಿದ್ದಾರೆ.
ಸಾಂದರ್ಭಿಕ ಚಿತ್ರ-ಬಿಲಾಸ್ ಪುರ ವೈದ್ಯಕೀಯ ಶಿಬಿರ
ಸಾಂದರ್ಭಿಕ ಚಿತ್ರ-ಬಿಲಾಸ್ ಪುರ ವೈದ್ಯಕೀಯ ಶಿಬಿರ

ಬಿಲಾಸ್ ಪುರ: ಛತ್ತೀಸ್ ಗಡ ಬಿಲಾಸ್ ಪುರ ವೈದ್ಯಕೀಯ ಶಿಬಿರದಲ್ಲಿ ಸಂತಾನಹರಣ ಶಸ್ತ್ರಕ್ರಿಯೆ ವೇಳೆ ಸಂಭವಿಸಿದ ಮಹಿಳೆಯರ ಸಾವಿನ ಪ್ರಕರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತನಿಖೆಗೆ ಆದೇಶಿಸಿದ್ದಾರೆ.

ಛತ್ತೀಸ್ ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಈ ಬಗ್ಗೆ ಸೂಚನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಹಿಳೆಯರ ಸಾವಿನ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು, ಇದೊಂದು ದುರದೃಷ್ಟಕರ ಘಟನೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಲಾಸ್ ಪುರದಲ್ಲಿ ಛತ್ತೀಸ್ ಘಡ ಸರ್ಕಾರ ಆಯೋಜನೆ ಮಾಡಿದ್ದ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 9 ಮಂದಿ ಮಹಿಳೆಯರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಮೇಲ್ನೋಟಕ್ಕೆ ಮಹಿಳೆಯರ ಸಾವಿಗೆ ಅಧಿಕ ರಕ್ತಸ್ರಾವವೇ ಕಾರಣ ಎಂದು ತಿಳಿದುಬಂದಿದ್ದರೂ, ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯತನ ಕೂಡ ಕಂಡು ಬರುತ್ತಿದೆ. ಸೂಕ್ತ ವೈದ್ಯಕೀಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಶಸ್ತ್ರಕ್ರಿಯೆ ನಡೆಸಿದ್ದರಿಂದಲೇ ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಕೇವಲ ಐದು ಗಂಟೆಯ ಅವಧಿಯಲ್ಲಿ ಬರೊಬ್ಬರಿ 80 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇಷ್ಟೊಂದು ತರಾತುರಿಯಲ್ಲಿ ವೈದ್ಯರು ಶಸ್ತ್ರಕ್ರಿಯೆ ನಡೆಸುವ ಅವಶ್ಯಕತೆಯಾದರೂ ಏನಿತ್ತು..? ಎಂಬ ಪ್ರಶ್ನೆ ಮೂಡುತ್ತಿದೆ. ಕೇವಲ ಬಿಲಾಸ್ ಪುರ ಶಿಬಿರದಲ್ಲಿಯೇ 9 ಮಹಿಳೆಯರು ಮೃತಪಟ್ಟಿದ್ದರೆ, ರಾಯ್ ಪುರದಲ್ಲಿ ಆಯೋಜನೆ ಮಾಡಲಾಗಿದ್ದ ಶಿಬಿರದಲ್ಲಿ 10 ಮಂದಿ ಮಹಿಳೆಯರು ತೀವ್ರ ಜ್ವರಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶಸ್ತ್ರಕ್ರಿಯೆಗೆ ಒಳಪಟ್ಟ ಇನ್ನು ಸಾಕಷ್ಟು ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪರಿಹಾರ ಧನ 2 ಲಕ್ಷದಿಂದ 4 ಲಕ್ಷಕ್ಕೆ ಏರಿಕೆ
ಇದೇ ವೇಳೆ ಸಂತಾನಹರಣ ಶಸ್ತ್ರಕ್ರಿಯೆಯಿಂದಾಗಿ ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ ಛತ್ತೀಸ್ಗಡ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರವನ್ನು ಹೆಚ್ಚಿಸಲಾಗಿದ್ದು, ಮೃತರ ಕುಟುಂಬಕ್ಕೆ 2 ಲಕ್ಷದ ಬದಲಿಗೆ 4 ಲಕ್ಷ ರುಪಾಯಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ರಮಣ್ಸಿಂಗ್ ಅವರು ಹೇಳಿದ್ದಾರೆ.

ವೈದ್ಯರಿಗೆ ಟಾರ್ಗೆಟ್ ನೀಡಿದ್ದ ಛತ್ತೀಸ್ ಗಡ ಸರ್ಕಾರ...!
ಮಹಿಳೆಯರ ಸರಣಿ ಸಾವಿನ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬೀಳುತ್ತಿದ್ದು, ಸಂತಾನ ಹರಣ ಶಸ್ತ್ರಕ್ರಿಯೆ ವೇಳೆ ಮಹಿಳೆಯರು ಸಾವಿಗೀಡಾಗಲು ರಾಜ್ಯ ಸರ್ಕಾರವೇ ಪರೋಕ್ಷ ಕಾರಣವಾಗಿತ್ತೇ? ಎಂಬ ಅನುಮಾನಗಳು ಮೂಡಿವೆ. ಏಕೆಂದರೆ ಸರ್ಕಾರದ ವತಿಯಿಂದ ಏರ್ಪಡಿಸಲಾಗಿದ್ದ ಈ ಶಿಬಿರದಲ್ಲಿ ಹೆಚ್ಚು ಸಂತಾನಹರಣ ಶಸ್ತ್ರಕ್ರಿಯೆ ನಡೆಸುವಂತೆ ಛತ್ತೀಸ್ ಗಡ ಸರ್ಕಾರವೇ ವೈದ್ಯರಿಗೆ ಗುರಿ ನೀಡಿತ್ತಂತೆ. ಏಪ್ರಿಲ್ ನಿಂದ ಮಾರ್ಚ್ ವರೆಗಿನ ವಾರ್ಷಿಕ ಸಮಯಾವಕಾಶದಲ್ಲಿ ನಿಗದಿತ ಗುರಿ ಮುಟ್ಟುವಂತೆ ಸರ್ಕಾರ ಸೂಚಿಸಿತ್ತಂತೆ.

ಒತ್ತಡಕ್ಕೊಳಗಾಗಿದ್ದ ವೈದ್ಯರು..!
ಇನ್ನು ಸರ್ಕಾರ ನಿಗದಿ ಪಡಿಸಿದ್ದ ಗುರಿಗೆ ಅನುಗುಣವಾಗಿ ವಾರ್ಷಿಕ ವೇಳಾಪಟ್ಟಿಯಂತೆ ಕ್ರಮ ಕೈಗೊಳ್ಳಬೇಕಿದ್ದ ವೈದ್ಯರು ಒಮ್ಮೆಲೆ ಈ ಪರಿಯ ಶಸ್ತ್ರ ಚಿಕಿತ್ಸೆ ನಡೆಸಲು ಏಕೆ ಮುಂದಾದರು ಎಂಬ ಶಂಕೆ ಮೂಡುತ್ತಿದೆ. ಛತ್ತೀಸ್ ಗಡ ಸರ್ಕಾರ ದಿನವೊಂದಕ್ಕೆ 40 ಶಸ್ತ್ರಕ್ರಿಯೆ ಮಾಡುವಂತೆ ವೈದ್ಯರಿಗೆ ಗುರಿ ನೀಡಿತ್ತು. ಆದರೆ ವೈದ್ಯರು ಶನಿವಾರ ಒಮ್ಮೆಲೇ 80 ಶಸ್ತ್ರಕ್ರಿಯೆ ನಡೆಸಿದ್ದರು. ವೈದ್ಯರು ಈ ಪರಿ ಶಸ್ತ್ರಕ್ರಿಯೆ ನಡೆಸಲು ಕಾರಣವೇನು..?

ಸರ್ಕಾರ ನಿಗದಿ ಪಡಿಸಿದ ಗುರಿ ಮತ್ತು ದಿನಾಂಕ ಹತ್ತಿರವಾಗುತ್ತಿದೆ ಎಂಬ ಒತ್ತಡಕ್ಕೊಳಗಾಗಿ ವೈದ್ಯರು ಭಾರಿ ಪ್ರಮಾಣದಲ್ಲಿ ಶಸ್ತ್ರಕ್ರಿಯೆಗೆ ಮುಂದಾಗಿ ಯಡವಟ್ಟು ಮಾಡಿಕೊಂಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿಯೇ ಮಹಿಳೆಯರ ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗಿದ್ದ ಕ್ರಮಗಳನ್ನು ವೈದ್ಯರು ನಿರ್ಲಕ್ಷಿಸಿದ ಪರಿಣಾಮ ಮಹಿಳೆಯರ ಸರಣಿ ಸಾವು ಸಂಭವಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ಸಲುವಾಗಿ ಛತ್ತೀಸ್ಗಡ ಸರ್ಕಾರ ಸಂತಾನ ಹರಣ ಶಸ್ತ್ರಕ್ರಿಯಾ ಶಿಬಿರವನ್ನು ಆಯೋಜಿಸಿದ್ದು, ಶಸ್ತ್ರಕ್ರಿಯೆಗೆ ಒಳಪಡುವ ಪ್ರತಿಯೊಬ್ಬ ಮಹಿಳೆಗೂ ಸರ್ಕಾರ 1, 400 ರುಪಾಯಿ ಹಣ ನೀಡುತ್ತಿದೆ. ಇದಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಕ್ರಿಯೆ ಬಳಿಕ ಹೆಚ್ಚುವರಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟಾರೆ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಉತ್ತಮ ಕಾರ್ಯಕ್ರಮವೊಂದು ದುರಂತ ಅಧ್ಯಾಯವೊಂದನ್ನು ಬರೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿ ಅಮಾಯಕ ಮಹಿಳೆಯರು ಪ್ರಾಣ ಬಿಡುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com