1 ಲಕ್ಷ ಶಸ್ತ್ರಕ್ರಿಯೆ ಮಾಡಿ ದಾಖಲೆ ಬರೆದು ಮಹಿಳೆಯರ ಸಾವಿಗೆ ಕಾರಣನಾದ ವೈದ್ಯ

ಛತ್ತೀಸ್‌ಗಡದಲ್ಲಿ ನಡೆದ ಸಂತಾನಹರಣ ಶಸ್ತ್ರಕ್ರಿಯೆ ಶಿಬಿರದ ನೇತೃತ್ವ ವಹಿಸಿದ್ದ ಡಾ.ಆರ್‌ಕೆ ಗುಪ್ತಾ ಅವರು ಈ ಹಿಂದೆ 1 ಲಕ್ಷ ಶಸ್ತ್ರಕ್ರಿಯೆ ಮಾಡಿ ದಾಖಲೆ ಬರೆದಿದ್ದರಂತೆ.
ಸಂತಾನಹರಣ ಶಸ್ತ್ರಕ್ರಿಯಾ ಶಿಬಿರದಲ್ಲಿ ಪೋಷಕರ ಆಕ್ರಂದನ
ಸಂತಾನಹರಣ ಶಸ್ತ್ರಕ್ರಿಯಾ ಶಿಬಿರದಲ್ಲಿ ಪೋಷಕರ ಆಕ್ರಂದನ

ಬಿಲಾಸ್‌ಪುರ: ಛತ್ತೀಸ್‌ಗಡದಲ್ಲಿ ನಡೆದ ಸಂತಾನಹರಣ ಶಸ್ತ್ರಕ್ರಿಯೆ ಶಿಬಿರದ ನೇತೃತ್ವ ವಹಿಸಿದ್ದ ಡಾ.ಆರ್‌ಕೆ ಗುಪ್ತಾ ಅವರು ಈ ಹಿಂದೆ 1 ಲಕ್ಷ ಶಸ್ತ್ರಕ್ರಿಯೆ ಮಾಡಿ ದಾಖಲೆ ಬರೆದಿದ್ದರಂತೆ.

ಡಾ.ಆರ್‌ಕೆ ಗುಪ್ತಾ ಅವರು ತಮ್ಮ ವೃತ್ತಿ ಜೀವನದಲ್ಲಿ 1 ಲಕ್ಷ ಯಶಸ್ವಿ ಶಸ್ತ್ರಕ್ರಿಯೆ ನಡೆಸಿದ ದಾಖಲೆ ನಿರ್ಮಿಸಿ, ಸರ್ಕಾರದ ವತಿಯಿಂದ ಪ್ರಶಸ್ತಿ ಕೂಡ ಪಡೆದಿದ್ದರು. ಸ್ವತಃ ಆರೋಗ್ಯ ಸಚಿವ ಅಮರ್ ಅಗರ್ವಾಲ್ ಅವರೇ ಗುಪ್ತಾ ಅವರನ್ನು 2014 ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಿ ಪಾರಿತೋಷಕವನ್ನು ನೀಡಿದ್ದರಂತೆ. ಆದರೆ ಬಿಲಾಸ್‌ಪುರ ಮತ್ತು ರಾಯ್‌ಪುರದಲ್ಲಿ ಗುಪ್ತಾ ಅವರ ನೇತೃತ್ವದಲ್ಲಿ ನಡೆದ ಸಂತಾನಹರಣ ಶಸ್ತ್ರಕ್ರಿಯೆಯಲ್ಲಿ ನಡೆದ ಮಹಿಳೆಯರ ಸರಣಿ ಸಾವು ಪ್ರಕರಣ ಅವರ ವೃತ್ತಿ ಜೀವನಕ್ಕೆ ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿದೆ.

ನಿವೃತ್ತಿಯ ಅಂಚಿನಲ್ಲಿರುವ ಡಾ.ಗುಪ್ತಾ ಅವರ ಮೇಲೆ ಇದೀಗ ಎಫ್‌ಐಆರ್ ದಾಖಲಾಗಿದ್ದು, ನಿರ್ಲಕ್ಷ್ಯ ತೋರಿದ ಪ್ರಕರಣದಡಿ ಬಿಲಾಸ್‌ಪುರ ಮತ್ತು ರಾಯ್‌ಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಅಮರ್ ಅಗರ್ವಾಲ್ ಅವರ ಸ್ವಕ್ಷೇತ್ರವಾದ ಬಿಲಾಸ್‌ಪುರದಲ್ಲೇ ದುರಂತದ ಪ್ರಮಾಣ ಹೆಚ್ಚಾಗಿದ್ದು, ಅಗರ್ವಾಲ್ ಅವರ ಮೇಲೆಯೂ ಇದೀಗ ರಾಜಿನಾಮೆಯ ತೂಗುಗತ್ತಿ ತೂಗುತ್ತಿದೆ. ಪ್ರಕರಣದ ನೈತಿಕ ಹೊಣೆಹೊತ್ತು ಆರೋಗ್ಯ ಸಚಿವ ಅಮರ್ ಅಗರ್ವಾಲ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.

ಒಂದೇ ದಿನದಲ್ಲಿ 83 ಶಸ್ತ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಡಾ.ಗುಪ್ತಾ
ಇನ್ನು ವೈದ್ಯಕೀಯ ಶಿಬಿರದ ನೇತೃತ್ವ ವಹಿಸಿಕೊಂಡಿದ್ದ ಡಾ.ಗುಪ್ತಾ ಅವರು ತಮ್ಮ ವ್ಯಾಪ್ತಿಯನ್ನು ಮೀರಿ ಕಳೆದ ಶನಿವಾರ ಒಂದೇ ದಿನದಲ್ಲಿ ಸುಮಾರು 83 ಶಸ್ತ್ರಕ್ರಿಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಪರ್ಧೆಗೆ ಬಿದ್ದವರಂತೆ ವರ್ತಿಸಿದ್ದ ಡಾ. ಗುಪ್ತಾ ಅವರು ಕೇವಲ ಓರ್ವ ಸಹಾಯಕನೊಂದಿಗೆ 83 ಶಸ್ತ್ರಕ್ರಿಯೆ ನಡೆಸಿದ್ದರು. 1 ಲಕ್ಷ ಶಸ್ತ್ರಕ್ರಿಯೆ ಮಾಡಿದ ಅಪಾರ ಅನುಭವವುಳ್ಳ ಡಾ.ಗುಪ್ತಾ ಅವರು, ಸರ್ಕಾರ ನಿಗದಿ ಪಡಿಸಿದ ಸಂಖ್ಯೆಗಿಂತಲೂ ದುಪ್ಪಟ್ಟು ಪ್ರಮಾಣದ ಸಂಖ್ಯೆಯ ಶಸ್ತ್ರಕ್ರಿಯೆ ಮಾಡಿದ್ದು ಏಕೆ? ಎಂಬ ಶಂಕೆ ವ್ಯಕ್ತವಾಗುತ್ತಿದೆ.  ಒಂದು ದಿನಕ್ಕೆ ಗರಿಷ್ಠ 40 ಶಸ್ತ್ರಕ್ರಿಯೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು, ಸರ್ಕಾರದ ಪರಿಮಿತಿಯನ್ನು ಮೀರಿ ಗುಪ್ತಾ ಅವರು ಈ ಪರಿಯ ಶಸ್ತ್ರಕ್ರಿಯೆ ನಡೆಸಲು ಕಾರಣವೇನು..?

ಹಣಕ್ಕೆ ಆಸೆ ಪಟ್ಟು ಯಡವಟ್ಟು ಮಾಡಿದರೇ ವೈದ್ಯರು
ಇನ್ನು ಸರ್ಕಾರಿ ಕಾರ್ಯಕ್ರಮವಾದ ಸಂತಾನಹರಣ ಶಸ್ತ್ರಕ್ರಿಯೆಗೆ ಪ್ರತಿ ವೈದ್ಯರಿಗೆ ಸರ್ಕಾರ ಇಂತಿಷ್ಟು ಹಣವನ್ನು ನಿಗದಿ ಮಾಡಿತ್ತು. ಅದರಂತೆ ಒಂದು ಶಸ್ತ್ರಕ್ರಿಯೆ ಮಾಡುವ ವೈದ್ಯನಿಗೆ 100 ರುಪಾಯಿ ಹೆಚ್ಚುವರಿ ಭತ್ಯೆ ನೀಡುವುದಾಗಿ ಛತ್ತೀಸ್‌ಗಡ ಸರ್ಕಾರ ಹೇಳಿತ್ತು. ಹೀಗಾಗಿ ವೈದ್ಯರು ಏನಾದರೂ ಹಣದ ಆಮಿಷಕ್ಕೆ ಒಳಗಾಗಿ ಹೆಚ್ಚೆಚ್ಚು ಶಸ್ತ್ರಕ್ರಿಯೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ.

ತುಕ್ಕು ಹಿಡಿದಿದ್ದ ಶಸ್ತ್ರಕ್ರಿಯಾ ಪರಿಕರಗಳು
ಮಹಿಳೆಯರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸಂತಾನಹರಣ ಶಸ್ತ್ರಕ್ರಿಯಾ ಶಿಬಿರವನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರ, ತನಿಖೆಗೆ ಆದೇಶಿಸಿದೆ. ಅದರಂತೆ ಪ್ರಾಥಮಿಕ ಮಾಹಿತಿ ಇದೀಗ ಲಭ್ಯವಾಗಿದೆ. ವೈದ್ಯರು ಶಿಬಿರದಲ್ಲಿ ಬಳಸಿದ್ದ ಶಸ್ತ್ರಕ್ರಿಯಾ ಪರಿಕರಗಳಾದ ಕತ್ತರಿ, ಸ್ಟೀಲ್ ಟ್ರೇಗಳು, ಬ್ಲೇಡ್‌ಗಳು ಮತ್ತು ಹೊಲಿಗೆ ಸೂಜಿಗಳು ತುಕ್ಕುಹಿಡಿದಿದ್ದವು ಎಂದು ಹೇಳಲಾಗುತ್ತಿದೆ. ಸ್ವತಃ ಶಸ್ತ್ರಕ್ರಿಯೆಗೆ ಒಳಗಾಗಿ ಕಳೆದ ಸೋಮವಾರ ಅನಾರೋಗ್ಯಕ್ಕೀಡಾಗಿದ್ದ ಮಹಿಳೆಯೇ ಇದನ್ನು ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾಳೆ. ಅದೇ ಸಂಜೆ ಮತ್ತೆ 8 ಮಂದಿ ಗಂಭೀರಗೊಂಡು ಅಸುನೀಗಿದ್ದಾರೆ. ಇದಲ್ಲದೇ ಮತ್ತೆ ಮೂವರು ಹೆಂಗಸರು ಮಂಗಳವಾರ ಮೃತಪಟ್ಟಿದ್ದಾರೆ. ಬಹುಶಃ ವೈದ್ಯರು ತುಕ್ಕು ಹಿಡಿದ ಪರಿಕರಗಳನ್ನು ಶಸ್ತ್ರಕ್ರಿಯೆಗೆ ಬಳಸಿದ್ದರಿಂದಲೇ ಮಹಿಳೆಯರ ಸಾವು ಸಂಭವಿಸರಬಹುದು ಎಂದು ತನಿಖಾ ತಂಡದಲ್ಲಿ ಒಬ್ಬರಾದ ಹಿರಿಯ ಅಧಿಕಾರಿ ಸಿದ್ಧಾರ್ಥ್ ಕೋಮಲ್ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣ ಸಂಬಂಧ ಶಿಬಿರದ ನೇತೃತ್ವ ವಹಿಸಿಕೊಂಡಿದ್ದ ಡಾ.ಆರ್‌ಕೆ ಗುಪ್ತಾ ಸೇರಿದಂತೆ ನಾಲ್ವರು ವೈದ್ಯರನ್ನು ಅಮಾನತು ಮಾಡಲಾಗಿದ್ದು, ಎಲ್ಲ ನಾಲ್ವರು ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಒಟ್ಟಾರೆ ಸರ್ಕಾರದ ಒಂದು ಉದ್ದೇಶಿತ ಕಾರ್ಯಕ್ರಮ ದುರಂತಕ್ಕೀಡಾಗಿದ್ದು, ಅದೂ ಕೂಡ ಓರ್ವ ಪ್ರಶಸ್ತಿ ವಿಜೇತ ಮತ್ತು ಶಸ್ತ್ರಕ್ರಿಯೆಯಲ್ಲಿ ದಾಖಲೆ ಬರೆದ ಓರ್ವ ನುರಿತ ವೈದ್ಯನ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಮಹಿಳೆಯರ ಸರಣಿ ಸಾವು ಸಂಭವಿಸಿರುವುದು ನಿಜಕ್ಕೂ ದುರದೃಷ್ಟಕರ. ಸರ್ಕಾರವಾಗಲೀ ಅಥವಾ ವೈದ್ಯರಾಗಲಿ ಕೊಂಚ ಹೆಚ್ಚುವರಿ ಮುತುವರ್ಜಿ ತೆಗೆದುಕೊಂಡಿದ್ದರೆ ಈ ಸರಣಿ ಸಾವು ಸಂಭವಿಸುತ್ತಿರಲಿಲ್ಲವೇನೋ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com