

ಡಮಾಸ್ಕಸ್/ಖಾನ್ಕೆ: ಸಿರಿಯಾ ಮತ್ತು ಇರಾಕ್‌ನಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡಿರುವ ಆಕ್ರಮಣಕಾರಿ ಜಿಹಾದಿ ಸಂಘಟನೆ ಇಸಿಸ್ ದಿನ ಕಳೆದಂತೆ ಬಲಿಷ್ಠವಾಗುತ್ತಾ ಸಾಗುತ್ತಿದೆ.
ತನ್ನದೇ ಆದ ಧ್ವಜ, ಕೋರ್ಟ್‌ಗಳನ್ನು, ಸಚಿವಾಲಯಗಳನ್ನು ಸ್ಥಾಪಿಸಿಕೊಂಡು, ತನ್ನದೇ ಪಾಸ್‌ಪೋರ್ಟ್‌ಗಳನ್ನು, ಲೈಸೆನ್ಸ್ ಪ್ಲೇಟ್‌ಗಳನ್ನು ಒದಗಿಸುತ್ತಿರುವ ಇಸ್ಲಾಮಿಕ್ ಸ್ಟೇಟ್(ಇಸಿಸ್) ಭಯೋತ್ಪಾದನೆ ಸಂಘಟನೆ ಈಗ ಸ್ವಂತ ಕರೆನ್ಸಿಗಳನ್ನು ಮುದ್ರಿಸುತ್ತಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ಮೂಲಕ ಇಸಿಸ್ 1,300ಕ್ಕೂ ಹೆಚ್ಚು ವರ್ಷಗಳ ಕಾಲ ಮಧ್ಯಪ್ರಾಚ್ಯವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಕ್ಯಾಲಿಫೇಟ್ ಯುಗವನ್ನು ಮರಳಿ ತರಲು ಪ್ರಯತ್ನಿಸುತ್ತಿದೆ.
ಕಲೀಪ್ ಮಾದಿರ ನಾಣ್ಯಗಳು: ನಾವು ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಟಂಕಿಸುತ್ತಿದ್ದೇವೆ ಎಂದು ಗುರುವಾರ ಇಸ್ಲಾಮಿಕ್ ಸ್ಟೇಟ್ ಉಗ್ರರು ಘೋಷಿಸಿದ್ದಾರೆ. ಇಸಿಸ್‌ನ ನಾಣ್ಯಗಳು 7ನೇ ಶತಮಾನದ ಕಲೀಫರ ಆಡಳಿತದ ವೇಳೆ ಟಂಕಿಸಲಾಗುತ್ತಿದ್ದ ನಾಣ್ಯಗಳ ಮಾರಿಯನ್ನೇ ಹೊಂದಿವೆ.
ಅವುಗಳು ಸೂಕ್ತ ತೂಕ ಮತ್ತು ಮೌಲ್ಯ ಹೊಂದಿರುತ್ತವೆ ಎಂದೂ ಇಸಿಸ್ ತಿಳಿಸಿದೆ. ಆದರೆ ನಾಣ್ಯಗಳ ಮುದ್ರಣ ಎಲ್ಲಿ ಮತ್ತು ಯಾವಾಗ ನಡೆಯುತ್ತದೆ., ಆ ನಾಣ್ಯಗಳ ಚಲಾವಣೆಯಾವಾಗ ಆಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಇದು ನಿಜವೇ?: ಸಾಧ್ಯವಿಲ್ಲ ಎನ್ನುತ್ತಾರೆ ಹಣಕಾಸಿಗೆ ಸಂಬಂಧಿಸಿದ ಇತಿಹಾಸ ತಜ್ಞರು. ಇದು ಕೇವಲ ಪ್ರಚಾರ ತಂತ್ರವಷ್ಟೆ. ಇದನ್ನು ಕಾರ್ಯಗತಗೊಳಿಸುವುದೂ ಅಷ್ಟು ಸುಲಭವಲ್ಲ. ಇಸಿಸ್ ನಾಣ್ಯವನ್ನೇನು ವಿಶ್ವಬ್ಯಾಂಕ್ ಮಾನ್ಯ ಮಾಡುತ್ತದೆಯೇ ಎಂದು ಪ್ರಶ್ನಿಸುತ್ತಾರೆ ತಜ್ಞರು. ಇಸಿಸ್‌ನ ನಾಣ್ಯಗಳೆಂದರೆ 'ಬ್ಲಡ್ ಡೈಮಂಡ್' ಇದ್ದಂತೆ. ಮಾನ್ಯತೆಯಿರುವ ನಾಣ್ಯಗಳೆಂದರೆ 'ಬ್ಲಡ್ ಡೈಮಂಡ್' ಇದ್ದಂತೆ. ಮಾನ್ಯತೆಯಿರುವ ಯಾವ ಹಣಕಾಸು ಸಂಸ್ಥೆಯೂ ಅದನ್ನು ಸ್ವೀಕರಿಸಲಾರದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಇಸಿಸ್ ಕ್ರೌರ್ಯ ಬಿಚ್ಚಿಟ್ಟ ಹೆಣ್ಣುಮಕ್ಕಳು: ಯಾಜಿದಿ ಹೆಣ್ಣುಮಕ್ಕಳ ಮೇಲೆ ಇಸಿಸ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ಉಗ್ರರ ಹಿಡಿತಕ್ಕೆ ಸಿಕ್ಕಿದ್ದರೂ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿರುವ ಇಬ್ಬರು ಬಾಲೆಯರು ತಾವು ಕಂಡ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.
15 ವರ್ಷದ ಆಸುಪಾಸಿನ ಸಾವಿರಾರು ಹೆಣ್ಣುಮಕ್ಕಳನ್ನು ಇಸಿಸ್ ಉಗ್ರರು ಅಪಹರಿಸಿದ್ದಾರೆ. ಹಣೆಯ ಮೇಲೆ ಬಂದೂಕಿನ ನಳಿಕೆಯಿಟ್ಟು ಅವರನ್ನು ಹೊತ್ತೊಯ್ಯುವ ಉಗ್ರರು ಕತ್ತಲ ಕೋಣೆಯೊಳಗೆ ಕೂಡಿ ಹಾಕಿ, ನಂತರ ಇಸಿಸ್‌ನ ಇತೆರ ಪುರುಷರಿಗೆ ಮಾರಾಟ ಮಾಡುತ್ತಾರೆ. ಈ ಪ್ರಕ್ರಿಯೆ ನಡೆಯುವುದರೊಳಗಾಗಿ ಅವರ ಮೇಲೆ ಎಷ್ಟೋ ಬಾರಿ ಅತ್ಯಾಚಾರ ಎಸಗಲಾಗುತ್ತದೆ. ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತದೆ. ಇವರಲ್ಲಿ ಹೆಚ್ಚಿನವರನ್ನು ಉತ್ತರ ಅಥವಾ ಪಶ್ಚಿಮ ಇರಾಕ್‌ನಲ್ಲಿ ಇರಿಸಲಾಗಿದ್ದರೆ, ಇನ್ನು ಕೆಲವರನ್ನು ಸಿರಿಯಾ ಮತ್ತು ಇತರೆ ರಾಷ್ಟ್ರಗಳಿಗೆ ಕಳುಹಿಸಲಾಗಿದೆ ಎಂದು ಈ ಬಾಲಕಿಯರು ತಿಳಿಸಿದ್ದಾರೆ.