ಶರಣಾಗುವಂತೆ ಬಾಬಾ ರಾಂಪಾಲ್‌ಗೆ ಪೊಲೀಸ್ ಡೆಡ್‌ಲೈನ್

ಬಾಬಾ ರಾಂಪಾಲ್‌ನನ್ನು ಶತಾಯಾಗತಾಯ ಬಂಧಿಸಲೇಬೇಕು ಎಂದು ಪಣ ತೊಟ್ಟಿರುವ ಹರ್ಯಾಣ ಪೊಲೀಸರು ಆಶ್ರಮ ಬಿಟ್ಟು ಹೊರಬರುವಂತೆ ರಾಂಪಾಲ್‌ಗೆ ಗಡುವು ನೀಡಿದ್ದಾರೆ.
ಹಿಸ್ಸಾರ್‌ನಲ್ಲಿರುವ ಬಾಬಾ ಆಶ್ರಮದ ಸುತ್ತಮುತ್ತಲಿನ ಆವರಣದಲ್ಲಿ ನಿಷೇಧಾಜ್ಞೆ ಜಾರಿ
ಹಿಸ್ಸಾರ್‌ನಲ್ಲಿರುವ ಬಾಬಾ ಆಶ್ರಮದ ಸುತ್ತಮುತ್ತಲಿನ ಆವರಣದಲ್ಲಿ ನಿಷೇಧಾಜ್ಞೆ ಜಾರಿ

ಹಿಸ್ಸಾರ್(ಹರ್ಯಾಣ): ವಿವಾದಾತ್ಮಕ ದೇವಾಮಾನವ ಬಾಬಾ ರಾಂಪಾಲ್‌ನನ್ನು ಶತಾಯಾಗತಾಯ ಬಂಧಿಸಲೇಬೇಕು ಎಂದು ಪಣ ತೊಟ್ಟಿರುವ ಹರ್ಯಾಣ ಪೊಲೀಸರು ಆಶ್ರಮ ಬಿಟ್ಟು ಹೊರಬರುವಂತೆ ರಾಂಪಾಲ್‌ಗೆ ಗಡುವು ನೀಡಿದ್ದಾರೆ.

ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಬಾಬಾ ರಾಂಪಾಲ್ ಪ್ರಸ್ತುತ ಹಿಸ್ಸಾರ್ ಜಿಲ್ಲೆಯ ಆಶ್ರಮದಲ್ಲೇ ಇದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ ನ್ಯಾಯಾಲಯದ ಬಂಧನ ಆದೇಶವಿದ್ದರೂ ಕಾನೂನಿಗೆ ಬೆಲೆ ನೀಡದ ಬಾಬಾರಾಂಪಾಲ್ ಬೆಂಬಲಿಗರು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಹೀಗಾಗಿ ಹಿಸ್ಸಾರ್ ಗ್ರಾಮ ಪೊಲೀಸರು ಮತ್ತು ರಾಂಪಾಲ್ ಬೆಂಬಲಿಗರ ನಡುವಿನ ರಣಾಂಗಣವಾಗಿ ಮಾರ್ಪಟ್ಟಿದ್ದು, ಬೆಂಬಲಿಗರು ನಡೆಸಿದ ಗುಂಡಿನ ದಾಳಿಯಿಂದಾಗಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಗೊಂದಲದ ಲಾಠಿ ಚಾರ್ಜ್‌ನಿಂದಾಗಿಯೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಹಲವು ಸಾರ್ವಜನಿಕರು ಗಾಯಗೊಂಡಿದ್ದರು.

ಪ್ರಸ್ತುತ ಹಿಸ್ಸಾರ್‌ನಲ್ಲಿರುವ ಬಾಬಾ ಆಶ್ರಮದ ಸುತ್ತಮುತ್ತಲಿನ ಆವರಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಆಶ್ರಮದಲ್ಲಿರುವ ಸಾರ್ವಜನಿಕರನ್ನು ಮತ್ತು ಆಶ್ರಮದ ಸಿಬ್ಬಂದಿಗಳನ್ನು ಒಬ್ಬೊಬ್ಬರನ್ನಾಗಿ ಪೊಲೀಸರು ಹೊರಹಾಕುತ್ತಿದ್ದಾರೆ. ಅಲ್ಲದೆ ಪೊಲೀಸರು ಪ್ರವೇಶಿಸಲಾಗದ ಆವರಣದಲ್ಲಿರುವ ಬೆಂಬಲಿಗರು ಕೂಡಲೇ ಹೊರಬರುವಂತೆ ಪೊಲೀಸರು ಗಡುವು ನೀಡಿದ್ದಾರೆ. ಬೆಂಬಲಿಗರು ಮಿತಿ ಮೀರಿ ವರ್ತಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಇನ್ನು ಪೊಲೀಸರ ಎಚ್ಚರಿಕೆಗೆ ಕ್ಯಾರೆ ಎನ್ನದ ಬೆಂಬಲಿಗರು ಪ್ರತಿಯಾಗಿ ಪೊಲೀಸರತ್ತಲೇ ಗುಂಡಿನ ದಾಳಿ ನಡೆಸುತ್ತಿದ್ದು, ಪರಿಸ್ಥಿತಿ ಮತ್ತಷ್ಟು ವಿಷಮಗೊಂಡಿದೆ.

ಆಶ್ರಮ ಪ್ರವೇಶಿಸಲು ಪೊಲೀಸರು ಶತ ಪ್ರಯತ್ನ ನಡೆಸುತ್ತಿದ್ದರೂ, ಪೊಲೀಸರ ಪ್ರಯತ್ನವನ್ನೆಲ್ಲಾ ಬೆಂಬಲಿಗರು ವಿಫಲ ಮಾಡುತ್ತಿದ್ದಾರೆ.

ಅಡಕತ್ತರಿಯಲ್ಲಿ ಸಿಲುಕಿರುವ ಹರ್ಯಾಣ ಪೊಲೀಸ್ ಇಲಾಖೆ
ಇನ್ನು ಈ ಹಿಂದಿನ ವಿಚಾರಣೆಯಲ್ಲಿಯೇ ನ್ಯಾಯಾಲಯ ಬಾಬಾರಾಂಪಾಲ್ ಅವರನ್ನು ಬಂಧಿಸುವಂತೆ ವಾರಂಟ್ ಜಾರಿ ಮಾಡಿತ್ತು. ಆದರೆ ಪೊಲೀಸರ ಬಂಧನ ಪ್ರಯತ್ನ ವಿಫಲವಾದ್ದರಿಂದ ಹರ್ಯಾಣ ಪೊಲೀಸರ ವಿರುದ್ಧ ಗರಂ ಆಗಿದ್ದ ನ್ಯಾಯಾಲಯ ಬಾಬಾ ರಾಂಪಾಲ್‌ನನ್ನು ಬಂಧಿಸಿ ತನ್ನಿ ಅಥವಾ ನೀವೇ ಬಂದು ಕಟಕಟೆಯಲ್ಲಿ ನಿಲ್ಲಿ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಛೀಮಾರಿ ಹಾಕಿತ್ತು. ಅಲ್ಲದೆ ಶುಕ್ರವಾರದೊಳಗೆ ಬಾಬಾ ರಾಂಪಾಲ್‌ನನ್ನು ಬಂಧಿಸಿ ಕರೆತರುವಂತೆ ಆದೇಶಿಸಿತ್ತು.

ಹೀಗಾಗಿ ಪ್ರಸ್ತುತ ಹರ್ಯಾಣ ಪೊಲೀಸ್ ಇಲಾಖೆ ಅಡಕತ್ತರಿಯಲ್ಲಿ ಸಿಲುಕಿದ್ದು, ಬಲ ಪ್ರಯೋಗ ಮಾಡಿ ಬಾಬಾ ರಾಂಪಾಲ್‌ನನ್ನು ಬಂಧಿಸಲು ಮುನ್ನುಗ್ಗಿದರೆ ಸಾವುನೋವುಗಳಾಗುವ ಅಪಾಯವಿದ್ದು, ಆಗಲೂ ನ್ಯಾಯಾಲಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇತ್ತ ಸಾವುನೋವುಗಳಿಲ್ಲದೇ ಅಥವಾ ಯಾವುದೇ ತೊಂದರೆ ಇಲ್ಲದಂತೆ ಬಂಧನ ಕಾರ್ಯಾಚರಣೆ ನಡೆಸಲು ಬೆಂಬಲಿಗರು ಬಿಡುತ್ತಿಲ್ಲ. ಹೀಗಾಗಿ ಪ್ರಸ್ತುತ ಪೊಲೀಸರ ಪರಿಸ್ಥಿತಿ ಅಕ್ಷರಶಃ ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ. ಬೆಂಬಲಿಗರ ವಿರೋಧಕ್ಕೆ ಮಣಿದರೆ ಪೊಲೀಸರು ನ್ಯಾಯಾಂಗ ನಿಂದನೆ ಎದುರಿಸುವ ಪರಿಸ್ಥಿತಿ ಮತ್ತೆ ಬರುತ್ತದೆ. ಹೀಗಾಗಿಯೇ ಇಂದು ಬಾಬಾ ರಾಂಪಾಲ್ ನನ್ನು ಶತಾಯಗತಾಯ ಬಂಧಿಸಲೇಬೇಕು ಎಂದು ಪಣ ತೊಟ್ಟಿರುವ ಹರ್ಯಾಣ ಪೊಲೀಸರು ಕೇಂದ್ರದ ನೆರವಿನೊಂದಿಗೆ ಹಿಸ್ಸಾರ್ ಆಶ್ರಮಕ್ಕೆ ನುಗ್ಗಿದ್ದಾರೆ. ಆದರೂ ಈ ವರೆಗಿನ ಕಾರ್ಯಾತರಣೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಮಾಧ್ಯಮ ಪ್ರತಿನಿಧಿಗಳೆಂದು ತಿಳಿದರೂ ಪೊಲೀಸರಿಂದ ದೌರ್ಜನ್ಯ: ಮಾಧ್ಯಮ ಪ್ರತಿನಿಧಿಗಳ ಆರೋಪ
ಇನ್ನು ರಾಜ್ಯಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ಬಾಬಾ ರಾಂಪಾಲ್ ಬಂಧನ ಪ್ರಸಂಗವನ್ನು ಚಿತ್ರೀಕರಿಸಲು ಆಶ್ರಮಕ್ಕೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ದಾಳಿ ನಡೆದಿದ್ದು, ಪೊಲೀಸರು ತಾವು ಮಾಧ್ಯಮದವರೆಂದೂ ತಿಳಿದೂ ಕೂಡ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತರು ಆರೋಪಿಸಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಗಳ ಮತ್ತು ಸ್ಥಳೀಯ ಸುದ್ದಿ ವಾಹಿನಿಗಳ ಹಲವು ಕ್ಯಾಮೆರಾಗಳು ಘಟನೆಯಲ್ಲಿ ಜಖಂಗೊಂಡಿದ್ದು, ಹಲವು ಪತ್ರಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com