ರಾಂಪಾಲ್ ಜಾಮೀನು ರದ್ದು, ಜೈಲೇ ಗತಿ

ಹರ್ಯಾಣದ ಹಿಸಾರ್ ಅಕ್ಷರಶಃ ರಣರಂಗವಾಗಲು ಕಾರಣವಾಗಿದ್ದ ದೇವ ಮಾನವ ರಾಂಪಾಲ್ ಕೊನೆಗೂ ಸೆರೆ ಸಿಕ್ಕಿದ್ದಾನೆ...
ರಾಂಪಾಲ್ ಜಾಮೀನು ರದ್ದು, ಜೈಲೇ ಗತಿ

ಬರ್ವಾಲಾ/ಚಂಡೀಗಡ: ಕೊಲೆ ಪ್ರಕರಣ ಆರೋಪಿಯಾಗಿರುವ ದೇವಮಾನವ ರಾಂಪಾಲ್ ಜಾಮೀನನ್ನು ಪಂಜಾಬ್- ಹರಿಯಾಣ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

2006ರಲ್ಲಿ ರಾಂಪಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. 2007ರಲ್ಲಿ ರಾಂಪಾಲ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.

ಹರ್ಯಾಣದ ಹಿಸಾರ್ ಅಕ್ಷರಶಃ ರಣರಂಗವಾಗಲು ಕಾರಣವಾಗಿದ್ದ ದೇವ ಮಾನವ ರಾಂಪಾಲ್‌ನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಇಂದು 2007ರಲ್ಲಿ ರಾಂಪಾಲ್ ಪಡೆದಿದ್ದ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೆಂಬಲಿಗರನ್ನೇ ಗುರಾಣಿಯಾಗಿಟ್ಟುಕೊಂಡಿದ್ದ ರಾಂಪಾಲ್, 18 ತಿಂಗಳ ಹಸುಗೂಸು ಸೇರಿದಂತೆ 6 ಅಮಾಯಕರ ಸಾವಿಗೆಕಾರಣನಾಗಿದ್ದ.

ಪೋಲೀಸರು ಆಶ್ರಮ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಎಲ್ಲ ರೀತಿಯ ರಣತಂತ್ರ ರೂಪಿಸಿದ್ದ ಆತ, ಆಶ್ರಮದಲ್ಲೇ ಅವಿತುಕೊಂಡು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದ. ಕೊನೆಗೂ ಸತತ 2 ದಿನಗಳ ಕಾರ್ಯಾಚರಣೆ ಬಳಿಕ ರಾಂಪಾಲ್‌ನನ್ನು ಆಶ್ರಮದಲ್ಲಿಯೇ ಸೆರೆ ಹಿಡಿದು ಪೊಲೀಸರು ಚಂಡೀಗಡಕ್ಕೆ ಕರೆದೊಯ್ದಿದ್ದಾರೆ.

ರಾಜದ್ರೋಹ ಆರೋಪ: ಈ ದೇವ 'ದಾನವ'ನ ವಿರುದ್ಧ ಬುಧವಾರ ರಾಜದ್ರೋಹ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಲಾಗಿತ್ತು. ಮಂಗಳವಾರ ಆರಂಭವಾದ ಕಾರ್ಯಾಚರಣೆ ಬುಧವಾರವೂ ಮುಂದುವರಿದಿತ್ತು. ಆಶ್ರಮದಲ್ಲಿದ್ದ 15 ಸಾವಿರ ಮಂದಿಯಲ್ಲಿ 14 ಸಾವಿರ ಮಂದಿ ಮಂಗಳವಾರ ರಾತ್ರಿ ಸುರಕ್ಷಿತವಾಗಿ ಹೊರಬಂದಿದ್ದರು. ರಾಂಪಾಲ್‌ನನ್ನು ಬಂಧಿಸದೇ ಪೊಲೀಸರು ಅಲ್ಲಿಂದ ಕದಲುವುದಿಲ್ಲ ಎಂದು ಹರ್ಯಾಣ ಸಿಎಂ ಮನೋಹರ್‌ಲಾಲ್ ಖಟ್ಟರ್ ತಿಳಿಸಿದ್ದರು.

  • 15,000 ಆಶ್ರಮದ ಒಳಗಿದ್ದ ರಾಂಪಾಲ್ ಬೆಂಬಲಿಗರು
  • 14,000 ಈ ಪೈಕಿ ಸ್ಥಳಾಂತರಗೊಂಡವರ ಸಂಖ್ಯೆ
  • 1,000 ಇನ್ನೂ ಆಶ್ರಮದಲ್ಲಿ ಇರುವವರು
  • 6 ಮಂದಿ ಮೃತರ ಸಂಖ್ಯೆ(18 ತಿಂಗಳ ಹಸಗೂಸು ಸೇರಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com