
ಹಿಸ್ಸಾರ್: ಹಿಸ್ಸಾರ್ ನ ಆಶ್ರಮದಲ್ಲಿ ನಡೆದ ಹಿಂಸಾಚಾರ ಕುರಿತಂತೆ ವಿವಾದಿತ ದೇವಮಾನ ಬಾಬಾ ರಾಂಪಾಲ್ ಪ್ರತಿಕ್ರಿಯಿಸಿದ್ದು, ಬೆಂಬಲಿಗರ ಸಾವು ದುರದೃಷ್ಟಕರ ಎಂದು ಹೇಳಿದ್ದಾನೆ.
ಕಳೆದ 2 ದಿನಗಳಿಂದ ಹಿಸ್ಸಾರ್ನ ಸಾತ್ಲೋಕ್ ಆಶ್ರಮದಲ್ಲಿ ನಡೆಯುತ್ತಿದ್ದ ಬಂಧನ ಹೈಡ್ರಾಮಾ ಕೊನೆಗೂ ಅಂತ್ಯಕಂಡಿದ್ದು, ನಿನ್ನೆ ರಾತ್ರಿ ವಿವಾದಿತ ಸ್ವಯಂ ಘೋಷಿತ ದೇವಮಾನವ ಬಾಬಾ ರಾಂಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಸತತ 2 ದಿನಗಳ ಕಾರ್ಯಾಚರಣೆ ಬಳಿಕ ಬಂಧನಕ್ಕೀಡಾದ ಬಾಬಾ ರಾಂಪಾಲ್, ಆಶ್ರಮದಲ್ಲಿ ನಡೆದ ಹಿಂಸೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದಾನೆ.
'ಆಶ್ರಮದಲ್ಲಿ ನಡೆದ ಹಿಂಸಾಚಾರದಿಂದಾಗಿ ಹಲವು ಮಹಿಳೆಯರು ಸಾವನ್ನಪ್ಪಿದ್ದಾರೆ. ಇದು ನನ್ನ ಮನಸ್ಸಿಗೆ ನೋವು ತಂದಿದ್ದು, ಘಟನೆಗಾಗಿ ನಾನು ವಿಷಾದಿಸುತ್ತೇನೆ. ನಾನು ಎಂದಿಗೂ ಯಾರನ್ನೂ ನನ್ನ ತಡೆಗೋಡೆಯಾಗಿ ಬಳಸಿಕೊಂಡಿಲ್ಲ ಎಂದು ಹೇಳಿದ್ದಾನೆ. ಅಂತೆಯೇ ಇಂದು ನ್ಯಾಯಾಲಯ ರಾಂಪಾಲ್ಗೆ ಈ ಹಿಂದೆ ನೀಡಿದ್ದ ಜಾಮೀನನ್ನು ರದ್ದು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಂಪಾಲ್, ನ್ಯಾಯಾಲಯಕ್ಕೆ ನಾನು ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾನೆ.
ಅಸ್ವಸ್ಥನೆಂದು ಸುಳ್ಳು ಹೇಳಿದ್ದ ರಾಂಪಾಲ್
ಇನ್ನು ಸತತ ನ್ಯಾಯಾಲಯದ ಕಲಾಪಕ್ಕೆ ಹಾಜರಾಗದೇ ಇದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಂಪಾಲ್, ಮೊದಲು ನಾನು ಜ್ವರ ಪೀಡಿತನಾಗಿದ್ದೆ. ಆದರೆ ಇದೀಗ ನಾನು ಸ್ವಸ್ಥನಾಗಿದ್ದೇನೆ ಎಂದು ಹೇಳಿದ್ದಾನೆ.
ಆದರೆ ಮೂಲಗಳು ತಿಳಿಸಿರುವಂತೆ ನ್ಯಾಯಾಲಯದ ಕಲಾಪಕ್ಕೆ ಹಾಜರಾದರೆ ನ್ಯಾಯಾಲಯವೇ ಈತನನ್ನು ಬಂಧಿಸಬಹುದು ಎಂಬ ಆತಂಕದಿಂದಾಗಿ ರಾಂಪಾಲ್ ಕಲಾಪಕ್ಕೆ ಹಾಜರಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ರಾಂಪಾಲ್ನನ್ನು ಬಂಧಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆಯಲ್ಲಿ ಬಾಬಾ ರಾಂಪಾಲ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ನವೆಂಬರ್ 28ರವರೆಗೆ ನ್ಯಾಯಾಂಗ ಬಂಧನ
ಅಂತೆಯೇ ನಿನ್ನೆ ರಾತ್ರಿ ಬಂಧನಕ್ಕೀಡಾಗಿದ್ದ ಬಾಬಾ ರಾಂಪಾಲ್‌ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನವೆಂಬರ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 2006ರಲ್ಲಿ ಹಿಸ್ಸಾರ್ ಸಾತ್‌ಲೋಕ್ ಆಶ್ರಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕೊಲೆಗೆ ಬಾಬಾ ರಾಂಪಾಲ್ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದ ಮೇರೆಗೆ ರಾಂಪಾಲ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.
Advertisement