ಲಾಹೋರ್: ಉತ್ತರ ವಜೀರಿಸ್ತಾನದಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಐಎಸ್‌ಐ ಸುರಕ್ಷಿತವಾಗಿ ಅಡಗಿಸಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ದಾವೂದ್‌ಗಾಗಿ 'ಸುರಕ್ಷಿತ ಸ್ವರ್ಗ'ಕ್ಕಾಗಿ ಹುಡುಕಾಟ ನಡೆಸುತ್ತಿರುವ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ (Inter-Services Intelligence) ಪ್ರಸ್ತುತ ತಾಲಿಬಾನ್ ಉಗ್ರರ ಕಪಿಹಿಡಿತದಲ್ಲಿರುವ ಉತ್ತರ ವಜೀರಿಸ್ಥಾನದಲ್ಲಿ ಅಡಗಿಸಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದು ದಾವೂದ್ ಇಬ್ರಾಹಿಂನ ತಾತ್ಕಾಲಿಕ ಅಡಗುತಾಣವಾಗಿದ್ದು, ಉತ್ತರ ವಜೀರಿಸ್ತಾನದಲ್ಲಿ ಅಮೆರಿಕದ ಡ್ರೋನ್ ವಿಮಾನಗಳು ಆಗ್ಗಿಂದ್ದಾಗ್ಗೆ ಕಾರ್ಯಾಚರಣೆ ನಡೆಸುವುದರಿಂದ ಅದೂ ಕೂಡ ದಾವೂದ್‌ಗೆ ಸುರಕ್ಷಿತ ತಾಣವಲ್ಲ ಎಂದು ಐಎಸ್‌ಐ ಭಾವಿಸಿದೆ. ಹೀಗಾಗಿ ಈ ಸ್ಥಳದಿಂದಲೂ ಆತನನ್ನು ಶೀಘ್ರದಲ್ಲಿಯೇ ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದಾವೂದ್‌ನನ್ನು ಇಲ್ಲಿಂದಲೂ ಬೇರೆಡೆಗೆ ರವಾನಿಸಲು ಐಎಸ್‌ಐ ಮುಂದಾಗಿದ್ದು, ಮೂಲಗಳ ಪ್ರಕಾರ ದಾವೂದ್‌ನನ್ನು ಥೈಲಾಂಡ್, ನೈರೋಬಿ, ಯುಎಇ ಅಥವಾ ಬಾಂಗ್ಲಾದೇಶಕ್ಕೆ ರವಾನೆ ಮಾಡಲು ಐಎಸ್‌ಐ ಯತ್ನಿಸಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೆ ಅದೇ ಪ್ರಯತ್ನವನ್ನು ಮುಂದುವರೆಸಲು ಐಎಸ್‌ಐ ತಯಾರಿ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಯುಎಇಗೆ ದಾವೂನನ್ನು ರವಾನೆ ಮಾಡುವ ಐಎಸ್‌ಐ ಪ್ಲಾನ್ ಭದ್ರತಾ ಕಾರಣಗಳಿಂದಾಗಿ ಕೊನೆ ಕ್ಷಣದಲ್ಲಿ ರದ್ದಾಗಿತ್ತು. ಆಂತೆಯೇ ಬಾಂಗ್ಲಾದೇಶಕ್ಕೆ ರವಾನೆ ಮಾಡಲು ಕೂಡ ಯೋಜನೆ ರೂಪಿಸಲಾಗಿತ್ತು. ಆದರೆ ಬಾಂಗ್ಲಾದೇಶ ಸರ್ಕಾರ ಭಾರತ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಮತ್ತು ಬಾಂಗ್ಲಾದೇಶದ ಸರ್ಕಾರದ ಮನವೋಲಿಸಿ ಭಾರತ ಬಹಳ ಸುಲಭವಾಗಿ ಸೇನಾಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿರುವುದರಿಂದ ದಾವೂದ್‌ನನ್ನು ಬಾಂಗ್ಲಾದೇಶಕ್ಕೆ ರವಾನೆ ಮಾಡಲು ಐಎಸ್‌ಐ ಹಿಂದೇಟು ಹಾಕಿದೆ ಎಂದು ಮೂಲಗಳು ತಿಳಿಸಿವೆ.
Advertisement