ಲಾಕರ್ ತೆರೆಯಲು ಆಶ್ರಮಕ್ಕೆ ಬಂದ ರಾಂಪಾಲ್..!

ಸಾತ್‌ಲೋಕ್ ಆಶ್ರಮದಲ್ಲಿರುವ ಪಾಸ್‌ವರ್ಡ್ ಸಹಿತ ಲಾಕರ್‌ಗಳನ್ನು ತೆರೆಯಲು ಬಂಧನಕ್ಕೀಡಾಗಿರುವ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್‌ನನ್ನು ಪೊಲೀಸರು ಮತ್ತೆ ಭಾನುವಾರ ಆಶ್ರಮಕ್ಕೆ ಕರೆತಂದಿದ್ದರು.
ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್ (ಸಂಗ್ರಹ ಚಿತ್ರ)
ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್ (ಸಂಗ್ರಹ ಚಿತ್ರ)

ಹಿಸ್ಸಾರ್: ಸಾತ್‌ಲೋಕ್ ಆಶ್ರಮದಲ್ಲಿರುವ ಪಾಸ್‌ವರ್ಡ್ ಸಹಿತ ಲಾಕರ್‌ಗಳನ್ನು ತೆರೆಯಲು ಬಂಧನಕ್ಕೀಡಾಗಿರುವ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್‌ನನ್ನು ಪೊಲೀಸರು ಮತ್ತೆ ಭಾನುವಾರ ಆಶ್ರಮಕ್ಕೆ ಕರೆತಂದಿದ್ದರು.

ಹಿಸ್ಸಾರ್‌ನಲ್ಲಿರುವ ಬೃಹತ್ ಆಶ್ರಮದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಹರ್ಯಾಣ ಪೊಲೀಸರು ಹಲವು ಲಾಕರ್‌ಗಳು ದೊರೆತಿದ್ದು, ಈ ಲಾಕರ್‌ಗಳೆಲ್ಲವೂ ಪಾಸ್‌ವರ್ಡ್‌ಗಳ ಮೂಲಕ ಲಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಇಂದು ಬಾಬಾ ರಾಂಪಾಲ್‌ನನ್ನು ಪೊಲೀಸರು ಆಶ್ರಮಕ್ಕೆ ಕರೆ ತಂದು ಲಾಕರ್‌ಗಳನ್ನು ತೆರಿಸಿದ್ದಾರೆ.

ಸಾಕಷ್ಟು ಕುತೂಹಲ ಕೆರಳಿಸಿದ್ದ ಸಾತ್‌ಲೋಕ್ ಆಶ್ರಮದಲ್ಲಿನ ಈ ಲಾಕರ್‌ಗಳಲ್ಲಿ ಏನಿತ್ತು ಎಂಬುದರ ಕುರಿತು ತನಿಖಾಧಿಕಾರಿಗಳು ವಿವರ ನೀಡದಿದ್ದರೂ, ಲಾಕರ್‌ಗಳಲ್ಲಿ ಆಶ್ರಮಕ್ಕೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಭಾನುವಾರವೂ ಆಶ್ರಮದಲ್ಲಿ ಶೋಧಕಾರ್ಯ ಮುಂದುವರೆಸಿದ್ದು, ಆಶ್ರಮದ ಕೋಣೆಯೊಂದರಲ್ಲಿ ರಾಂಪಾಲ್ ಬೆಂಬಲಿಗರು ಸಂಗ್ರಹಿಸಿಟ್ಟಿದ್ದ ದೊಣ್ಣೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ರಾಂಪಾಲ್ ಬಂಧನಕ್ಕಾಗಿ ಪೊಲೀಸರು ಆಗಮಿಸಿದಾಗ ಅವರ ವಿರುದ್ಧ ಬಳಕೆ ಮಾಡಲು ಈ ದೊಣ್ಣೆಗಳನ್ನು ಸಂಗ್ರಹಿಸಿಡಲಾಗಿರಬಹುದು ಎಂದು ಶಂಕಿಸಲಾಗಿದೆ.

ಆಶ್ರಮದಲ್ಲಿ ನಡೆದಿದ್ದ 2 ಕೊಲೆಗಳಿಗೆ ಸಂಬಂಧಿಸಿದಂತೆ ಬಾಬಾ ರಾಂಪಾಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದಲ್ಲದೆ ಇತ್ತೀಚೆಗೆ ಹಿಸ್ಸಾರ್ ಆಶ್ರಮದಲ್ಲಿ ನಡೆದ ಹಿಂಸಾಚಾರದಲ್ಲಿ 6 ಮಹಿಳೆಯರು ಮೃತಪಟ್ಟ ಕುರಿತ ಕೊಲೆ ಪ್ರಕರಣವನ್ನು ಕೂಡ ಬಾಬಾ ರಾಂಪಾಲ್ ವಿರುದ್ಧ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ವಿಶೇಷ ತನಿಖಾ ದಳ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com