
ಡಿಬ್ರೂಗರ್: ಅಸ್ಸಾಂನ ಡಿಬ್ರೂಗರ್ ಜಿಲ್ಲೆಯ ರಾಜ್‌ಗರ್ ನಗರದ ಮಾರುಕಟ್ಟೆಯೊಂದರಲ್ಲಿ ಭಾನುವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, 27 ಮಂದಿಗೆ ತೀವ್ರ ಗಾಯಗಳಾಗಿವೆ.
ರಾಜ್‌ಗರ್ ನಗರದ ಮಾರುಕಟ್ಟೆಯಲ್ಲಿ ಕಳೆದ ರಾತ್ರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 27 ಮಂದಿಗೆ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರ ಕಾರಣವೇನೆಂಬುದು ತಿಳಿದುಬಂದಿಲ್ಲ. ಅಲ್ಲದೆ ಘಟನಾ ಸ್ಥಳದಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಡಿಬ್ರೂಗರ್‌ನ ಪೊಲೀಸ್ ವರಿಷ್ಠಾಧಿಕಾರಿ ರಾಣಾ ಬೂಯಾನ್ ಹೇಳಿದ್ದಾರೆ.
ಗ್ರೆನೇಡ್, ಕಚ್ಚಾ ಬಾಂಬ್ ಅಥವಾ ಐಇಡಿಯಿಂದ ಸ್ಫೋಟ ಸಂಭವಿಸಿದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ರಾಣಾ ಅವರು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಟ್ರಕ್‌ವೊಂದಕ್ಕೆ ಸರಕು ತುಂಬುತ್ತಿದ್ದ ವೇಳೆ ಟ್ರಕ್ ಕೆಳಗೆ ಸ್ಫೋಟ ಸಂಭವಿಸಿದೆ. ಟ್ರಕ್‌ನ ಇಂಜಿನ್ ಸಿಡಿದಿರುವ ಸಾಧ್ಯತೆ ಇದ್ದು, ತನಿಖೆ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟಿವನನ್ನು 55 ವರ್ಷದ ಮಣಿಲಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಅಸ್ಸಾಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement