ನೈತಿಕ ಪೊಲೀಸ್‌ಗಿರಿ ಸಹಿಸಲ್ಲ: ಸಿಎಂ

ಹಣವಂತರಿಗೆ ಕಾನೂನು ಕೊಳ್ಳಲು ಅವಕಾಶ...
ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ
ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ
Updated on: 

ಬೆಂಗಳೂರು: ಹಣವಂತರಿಗೆ ಕಾನೂನು ಕೊಳ್ಳಲು ಅವಕಾಶ ನೀಡುವುದಿಲ್ಲ. ಇನ್ನು ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ದಾಳಿಯನ್ನು ಸಹಿಸುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅತ್ಯಾಚಾರ ಸೇರಿದಂತೆ ತರೆ ಪ್ರಕರಣಗಳಲ್ಲಿ ಹಣವಂತರು ಕಾನೂನು ಕೊಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಅಮಾಯಕರನ್ನು ಕಷ್ಟಕ್ಕೆ ಸಿಲುಕಿಸಲು ಯತ್ನಿಸಲಾಗುತ್ತಿದೆ. ಇಂಧ ಹೇಯ ಕೃತ್ಯಗಳಿಗೆ ರಾಜ್ಯ ಸರ್ಕಾರ ಅಥವಾ ಪೊಲೀಸರು ಅವಕಾಶ ನೀಡುವುದಿಲ್ಲ. ಇಂಥ ವಿಚಾರಗಳಲ್ಲಿ ಯಾವುದೇ ಒತ್ತಡವಿದ್ದರೂ ಅದನ್ನು ಲೆಕ್ಕಿಸಬಾರದು ಎಂದು ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಹೇಳಿದರು.

ನೈತಿಕ ಪೊಲೀಸ್‌ಗಿರಿ ಹೆಸರಲ್ಲಿ ಅಮಾಯಕರ ಮೇಲೆ ದಾಳಿಯಾಗುತ್ತದೆ. ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲದ ನೈತಿಕ ಪೊಲೀಸ್‌ಗಿರಿಯನ್ನು ಸರ್ಕಾರ ಸಹಿಸುವುದಿಲ್ಲ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿದ್ದಾರೆ. ಅವರ ಕೆಲಸವನ್ನು ಬೇರೆಯವರು ಮಾಡುವ ಅಗತ್ಯವಿಲ್ಲ ಎಂದರು.

ಇತ್ತೀಚೆಗೆ ಮಕ್ಕಳ ಮೇಲೆ ಅತ್ಯಾಚಾರದಂಥ ಹೇಯ ಕೃತ್ಯಗಳು ಹೆಚ್ಚುತ್ತಿವೆ. ಇವುಗಳನ್ನು ಪೊಲೀಸರು ಸೂಕ್ಷ್ಮ ಹಾಗೂ ಗಂಭೀರವಾಗಿ ಪರಿಗಣಿಸಬೇಕು. ಇಂಥ ವಿಕೃತ ಮನಸ್ಸಿನ ಆರೋಪಿಗಳಿಗೆ ಕೂಡಲೇ ಶಿಕ್ಷಿಸಿ, ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬೇಕು. ಜತೆಗೆ ಇಂಥ ಕೃತ್ಯಗಳು ಪುನರಾವರ್ತನೆಯಾಗದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದರು.

ಈ ಎಲ್ಲ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಜಾತ್ಯಾತೀತವಾಗಿ ವಿಚಾರಣೆ ನಡೆಸಬೇಕು. ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಶಕ್ತಿವಂತರು ಹಾಗೂ ಯಾವುದೋ ಜಾತಿಯ ಪ್ರಭಾವಗಳಿಗೆ ಕಾನೂನು ಉಲ್ಲಂಘನೆಯಾಗದಂತೆ ಪೊಲೀಸರು ಎಚ್ಚರ ವಹಿಸಬೇಕು. ಆ ಮೂಲಕ ಕಾನೂನನ್ನು ಜನರು ಗೌರವಿಸುವಂತೆ ಮಾಡಬೇಕೆಂದರು.

ಆಂತರಿಕ ಭದ್ರತೆಗೆ ಪೊಲೀಸರು
ಸೈನಿಕರು ದೇಶದ ಗಡಿಯನ್ನು ಕಾಯುತ್ತಾರೆ. ಆಂತರಿಕ ಭದ್ರತೆಯನ್ನು ಕಾಪಾಡಿಕೊಳ್ಳುವುದು ಪೊಲೀಸರ ಕರ್ತವ್ಯ. ಒಂದೆಡೆ ಸಂಪೂರ್ಣ ಕಾನೂನು ಸುವ್ಯವಸ್ಥೆ ಹದ ಗೆಟ್ಟಿರುವ ರಾಜ್ಯಗಳಿದ್ದರೆ, ಮತ್ತೊಂದೆಡೆ ಮಧ್ಯ ರಾತ್ರಿಯೂ ಭಟವಿಲ್ಲದೆ ಹೆಣ್ಣು ಮಕ್ಕಳು ಓಡಾಡಬಲ್ಲ ವಾತಾವರಣವಿರುವ ರಾಜ್ಯಗಳಿವೆ. ಇದು ಆಯಾ ರಾಜ್ಯಗಳ ಪೊಲೀಸ್ ವ್ಯವಸ್ಥೆಯ ಮೇಲೆ ನಿರ್ಧಾರವಾಗಿರುತ್ತದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com