ಭಾರತಕ್ಕಾಗಿ ಕೆಲಸ ಮಾಡಲಿರುವ ಇಸಿಸ್ ಉಗ್ರ..?

ಭಾರತವನ್ನು ತೊರೆದು ಇಸಿಸ್ ಉಗ್ರಗಾಮಿ ಸಂಘಟನೆಯನ್ನು ಸೇರಿದ್ದ ಆರಿಫ್ ಮಜೀದ್ ಮತ್ತೆ ಭಾರತಕ್ಕಾಗಿ ಕೆಲಸ ಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ.
ಶಂಕಿತ ಐಎಸ್ ಉಗ್ರ ಆರಿಫ್ ಮಜೀದ್ (ಸಂಗ್ರಹ ಚಿತ್ರ)
ಶಂಕಿತ ಐಎಸ್ ಉಗ್ರ ಆರಿಫ್ ಮಜೀದ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಭಾರತವನ್ನು ತೊರೆದು ಇಸಿಸ್ ಉಗ್ರಗಾಮಿ ಸಂಘಟನೆಯನ್ನು ಸೇರಿದ್ದ ಆರಿಫ್ ಮಜೀದ್ ಮತ್ತೆ ಭಾರತಕ್ಕಾಗಿ ಕೆಲಸ ಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಇಸಿಸ್ ಉಗ್ರ ಆರಿಫ್ ಮಜೀದ್ ಭಾರತಕ್ಕಾಗಿ ಕೆಲಸ ಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಸತತ ವಿಚಾರಣೆ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಮಜೀದ್, ಇಸಿಸ್ ಸೇರಿ ನಾನು ತಪ್ಪು ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ. ಅಲ್ಲದೆ ತನ್ನ ತಪ್ಪಿಗೆ ಪಶ್ಛಾತ್ತಾಪ ಪಡುತ್ತಿದ್ದು, ಮತ್ತೆ ಆಲ್ಲಿಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಮಜೀದ್ನನ್ನು ಬಂಧಿಸಿರುವ ತನಿಖಾಧಿಕಾರಿಗಳು ಈತನನ್ನು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳಲು ಯೋಚಿಸಿದ್ದು, ಭಾರತದ ಮೇಲೆ ತನ್ನ ಹತೋಟಿ ಸಾಧಿಸಲು ಹವಣಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ (ಐಎಸ್ಐಎಸ್) ಸಂಘಟನೆಯನ್ನು ಈತನ ಮೂಲಕವೇ ಹಣಿಯಲು ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಇಸಿಸ್ ಸಂಘಟನೆಯಲ್ಲಿ ತರಬೇತಿ ಪಡೆದು ವಾಪಸಾಗಿರುವ ಮಜೀದ್ನನ್ನು ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿದಾರನಾಗಿ ಬಳಸಿಕೊಳ್ಳುವ ಮೂಲಕ ಇಸಿಸ್ ಸಂಘಟನೆಯ ಚಲನವಲನಗಳ ಮೇಲೆ ಕಣ್ಣಿಡಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿಯೇ ಪ್ರಸ್ತುತ ಮಜೀದ್ ಬಳಿ ಇರುವ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಆ ಬಳಿಕ ಆತನನ್ನು ಅಧಿಕಾರಿಗಳು ತಮ್ಮ ಮಾಹಿತಿದಾರನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಇಂಬು ನೀಡುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ಯಾರಿಗೂ ಹಿಂಸೆ ನೀಡುವ ಉದ್ದೇಶ ನಮಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ' ಎಂದು ಹೇಳಿದ್ದರು.

ಮೂಲತಃ ಮುಂಬೈ ಮೂಲದ ಆರಿಫ್ ಮಜೀದ್ ಇಸಿಸ್ ಪ್ರಭಾವಕ್ಕೆ ಒಳಗಾಗಿ ಆ ಸಂಘಟನೆಯನ್ನು ಸೇರಿದ್ದನು. ಇರಾಕ್ ಸರ್ಕಾರದ ವಿರುದ್ಧ ಇಸಿಸ್ ನಡೆಸುತ್ತಿರುವ ಯುದ್ಧದಲ್ಲಿ ಪಾಲ್ಗೊಳ್ಳಲು ಆತ ತನ್ನ  ಪೋಷಕರನ್ನು ಕೂಡ ತ್ಯಜಿಸಿ ಇರಾಕ್ಗೆ ಹಾರಿದ್ದನು. ಅಲ್ಲದೆ ಆತನೇ ಹೇಳಿಕೊಂಡಿರುವಂತೆ ಇಸಿಸ್ ಸಂಘಟನೆಯಲ್ಲಿ ಆತ ಸುಮಾರು 15 ದಿನಗಳ ಕಾಲ ಶಸ್ತ್ರಾಸ್ತ್ರ ತರಬೇತಿಯನ್ನು ಕೂಡ ಪಡೆದಿದ್ದನು. ಆದರೆ ಬಳಿಕ ಆತ ಟರ್ಕಿ ಮಾರ್ಗವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೂಲಕ ಭಾರತಕ್ಕೆ ವಾಪಸಾಗಿದ್ದನು.

ಯುದ್ಧದಲ್ಲಿ ಕಾಲಿಗೆ ಗುಂಡು ಬಿದ್ದಿದ್ದರಿಂದ ಭಾರತಕ್ಕೆ ವಾಪಸ್..!
ಆರಿಫ್ ಮಜೀದ್ ಹೇಳಿಕೊಂಡಿರುವಂತೆ ಇರಾಕ್ ವಿರುದ್ಧದ ಯುದ್ಧದಲ್ಲಿ ತನ್ನ ಕಾಲಿಗೆ ಗುಂಡುಬಿದ್ದಿದ್ದು, ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಪ್ರಸ್ತುತ ಈತನ ಮಾತನ್ನು ನಂಬದ ಅಧಿಕಾರಿಗಳು ಈತನ ಚಲನವಲನ ಕುರಿತು ಕಣ್ಗಾವಲು ಇಡಲು ನಿರ್ಧರಿಸಿದ್ದಾರೆ. ಈತನಷ್ಟೇ ಅಲ್ಲದೇ ಈತನ ತಂದೆಯೊಂದಿಗೂ ನಿರಂತರ ಸಂಪರ್ಕದಲ್ಲಿರುವ ಅಧಿಕಾರಿಗಳು ಈತನ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ಮೂಲಗಳ ಪ್ರಕಾರ ಮಜೀದ್ನಂತೆಯೇ ಮುಂಬೈನ ಕಲ್ಯಾಣ ಮೂಲದ ಇನ್ನೂ ಮೂವರು ಯುವಕರು ಇರಾಕ್ಗೆ ಹಾರಿದ್ದು, ಅವರೆಲ್ಲರೂ ಜೀವಂತವಾಗಿ ಇದ್ದಾರೆ ಮತ್ತು ಇರಾಕ್ ವಿರುದ್ಧ ಯುದ್ಧದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com