ನವದೆಹಲಿ: ಮೊದಲ ಪ್ರಯತ್ನದಲ್ಲೇ ಮಂಗಳಯಾನವನ್ನು ಯಶಸ್ವಿಯಾಗಿಸಿ ಹೊಸ ಚರಿತ್ರೆ ನಿರ್ಮಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೀಗ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವತ್ತ ಮೊದಲ ಹೆಜ್ಜೆ ಇರಿಸಿದೆ.
ಮಾನವ ಸಹಿತ ಬಾಹ್ಯಾಕಾಶ ಯಾನ 'ಸ್ಪೇಸ್ ಕ್ಯಾಪ್ಸೂಲ್' ಅನ್ನು ಡಿಸೆಂಬರ್ 1 ರಿಂದ 20ರ ನಡುವಿನ ಅವಧಿಯಲ್ಲಿ ಇಸ್ರೋ ಪ್ರಯೋಗಕ್ಕೆ ಒಳಪಡಿಸಲಿದೆ. ಇಸ್ರೋದ ಅತಿ ಭಾರದ ರಾಕೆಟ್ ಎನ್ನಿಸಿಕೊಂಡಿರುವ ಜಿಎಸ್'ಎಲ್'ವಿ-ಮಾರ್ಕ್ 3 ವಾಹಕ ಈ ಸ್ಪೇಸ್ ಕ್ಯಾಪ್ಸೂರನ್ನು ಹೊತ್ತೊಯ್ಯಲಿದೆ.
ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸ್ಪೇಸ್ ಕ್ಯಾಪ್ಸೂಲ್‌ನ್ನು ಬಾಹ್ಯಾಕಾಶಕ್ಕೆ ಹಾರಿಬಿಡಲಾಗುತ್ತದೆ. ಯಾವ ದಿನಾಂಕದಂದು ಹಾರಿಬಿಡಲಾಗತ್ತದೆ ಎಂಬ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಂ.ವೈ.ಎಸ್ ಪ್ರಸಾದ್ ತಿಳಿಸಿದ್ದಾರೆ.
ಈ ರಾಕೆಟ್ ಮೌಲ್ಯ ಸುಮಾರು 140 ಕೋಟಿ ಮತ್ತು ಸ್ಪೇಸ್ ಕ್ಯಾಪ್ಸೂಲ್ ಮೌಲ್ಯ 15 ಕೋಟಿ ರುಪಾಯಿ ಆಗಿದೆ. ಮೊದಲ ಪ್ರಯತ್ನದಲ್ಲಿ ಯಾವುದೇ ಮಾನವರನ್ನು ಕಳಿಸದೇ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುತ್ತದೆ ಎಂದು ಪ್ರಸಾದ್ ಹೇಳಿದ್ದಾರೆ.
Advertisement