
ಮುಂಬೈ: ಮೂರು ತಿಂಗಳ ಕಾಲ ಇರಾಕ್ ಹಾಗೂ ಸಿರಿಯಾದ ಯುದ್ಧಭೂಮಿಯಲ್ಲಿ ಕಾದಾಡಿ, ಶುಕ್ರವಾರವಷ್ಟೇ ಭಾರತಕ್ಕೆ ಹಿಂತಿರುಗಿದ್ದ ಮುಂಬೈ ಯುವಕ ಅರೀಬ್ ಮಜೀದ್ ಇಸಿಸ್‌ನಿಂದ ಬೇಸತ್ತು ತಾಯ್ನಾಡಿಗೆ ಬಂದಿಲ್ಲ. ಬದಲಾಗಿ ಇಸಿಸ್ಸೇ ಆತನನ್ನು ಮಹತ್ತರವಾದ ಉದ್ದೇಶಕ್ಕೆ ಭಾರತಕ್ಕೆ ಕಳುಹಿಸಿದೆ!
ಭಾರತದಲ್ಲಿ ಇನ್ನಷ್ಟು ಯುವಕರನ್ನು ಇಸಿಸ್‌ಗೆ ಸೆಳೆಯುವ ಮಹತ್ತರವಾದ ಹೊಣೆಯನ್ನು ಇಸಿಸ್ ಮಜೀದ್‌ಗೆ ನೀಡಿದೆ ಎಂದು ಆತನನ್ನು ವಿಚಾರಣೆ ನಡೆಸಿದ ಅಧಿಕಾರಿಗಳ ಮೂಲಗಳು ತಿಳಿಸಿದೆ. ಇಸಿಸ್ ಸೇರಿದ್ದಕ್ಕೆ ಮಜೀದ್‌ಗೆ ಯಾವುದೇ ಪಶ್ಚಾತ್ತಾಪ ಇಲ್ಲದಿರುವುದು ಈ ವಾದವನ್ನು ಪುಷ್ಟೀಕರಿಸಿದೆ. ವಿಚಾರಣೆ ವೇಳೆ ಮಜೀದ್ ನೀಡಿದ ಮಾಹಿತಿ ಪ್ರಕಾರ, ಇರಾಕ್ ತಲುಪಿದ ಬಳಿಕ ಆತನಿಗೆ ಇಸಿಸ್ 15 ದಿನದ ತರಬೇತಿ ನೀಡಿದೆ. ಆ ಬಳಿಕ ಆತ ಮೂರು ತಿಂಗಳಿಗೂ ಹೆಚ್ಚು ಕಾಲ ಇರಾಕ್ ಮತ್ತು ಸಿರಿಯಾದಲ್ಲಿ ಇಸಿಸ್ ಪರವಾಗಿ ಹೋರಾಟ ನಡೆಸಿದ್ದ.
ಕೆಲ ದಿನಗಳ ಹಿಂದೆ ತಂದೆಗೆ ಕರೆ ಮಾಡಿದ್ದ ಮಜೀದ್ ಭಾರತಕ್ಕೆ ವಾಪಸಾಗುವ ಇಂಗಿತ ವ್ಯಕ್ತಪಡಿಸಿದ್ದ. ಮಗನನ್ನು ವಾಪಸ್ ಕರೆತರಲು ಮಜೀದ್ ತಂದೆ ಎನ್‌ಐಎ ನೆರವು ಕೋರಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಕಳೆದ ಭಾನುವಾರ ಅಗತ್ಯ ದಾಖಲೆಗಳೊಂದಿಗೆ ಟರ್ಕಿಗೆ ತೆರಳಿದ್ದರು. ಅಲ್ಲಿಂದ ಮಜೀದ್‌ನನ್ನು ವಾಪಸ್ ಕರೆತರಲು ಅಗತ್ಯ ವ್ಯವಸ್ಥೆ ಮಾಡಿದ್ದರು. ಮುಂಬೈಗೆ ಬಂದಿಳಿಯುತ್ತಿದ್ದಂತೆ ಆತನನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು ಇಸಿಸ್ ನೇಮಕ ವ್ಯವಸ್ಥೆ ಕುರಿತು ಮಾಹಿತಿ ಕಲೆಹಾಕಲು ಆರಂಭಿಸಿದ್ದಾರೆ.
ಗಾಯಗಳಾಗಿತ್ತು
ಮಜೀದ್ ಭಾರತಕ್ಕೆ ಹಿಂತಿರುಗಲು ಆತನಿಗಾದ ಗಾಯಗಳೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇರಾಕ್ ಮತ್ತು ಸಿರಿಯಾ ಯುದ್ಧಭೂಮಿಯಲ್ಲಿ ಇಸಿಸ್ ಪರ ಕಾದಾಡುವಾಗ ಮಜೀದ್‌ಗೆ ಎರಡು ಬಾರಿ ಗುಂಡು ತಗುಲಿತ್ತು. ಹಾಗಾಗಿ ಆತನಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಇದೇ ಕಾರಣಕ್ಕೆ ಆತ ಭಾರತಕ್ಕೆ ವಾಪಸಾಗುವ ಇಂಗಿತ ವ್ಯಕ್ತಪಡಿಸಿದ್ದಾನೆ. ಒಮ್ಮೆ ಸ್ವದೇಶಕ್ಕೆ ವಾಪಸಾದ ಬಳಿಕ ಇಲ್ಲಿದ್ದುಕೊಂಡೇ ಇಸಿಸ್ ಹೋರಾಟಕ್ಕೆ ನೆರವು ನೀಡುವುದು ಆತನ ಉದ್ದೇಶವಾಗಿತ್ತು ಎಂಬುದು ಅಧಿಕಾರಿಗಳ ಅಭಿಪ್ರಾಯ. ಈ ನಡುವೆ, ಇರಾಕ್‌ಗೆ ತನ್ನ ಜತೆ ಪ್ರಯಾಣ ಬೆಳಿಸಿದ ಕಲ್ಯಾಣ್‌ನ ಇತರೇ ಮೂವರು ಯುವಕರು ಜೀವಂತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ ಉಗ್ರ.
ಡಿ. 8ರ ವರೆಗೆ ಎನ್‌ಐಎ ಕಸ್ಟಡಿ!
ಮಜೀದ್‌ನನ್ನು ಡಿ. 8ರವರೆಗೆ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಭಾರತದ ಯುವಕರನ್ನು ಇಸಿಸ್‌ಗೆ ಹೇಗೆ ನೇಮಿಸಲಾಗುತ್ತದೆ ಎನ್ನುವ ಮಾಹಿತಿ ಭೇದಿಸಲು ಮಜೀದ್‌ನ ವಿಚಾರಣೆ ನಡೆಸುವುದು ಎನ್‌ಐಎಗೆ ಅನಿವಾರ್ಯವಾಗಿದೆ. ಜತೆಗೆ, ಮಜೀದ್ ವಿಚಾರಣೆ ಮೂಲಕ ಇಸಿಸ್ ಸೇರುವ ಮೊದಲು ಯುವಕರಿಗೆ ಯಾವ ರೀತಿಯ ತರಬೇತಿ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನೂ ಸಂಗ್ರಹಿಸಲು ಎನ್‌ಐಎ ಪ್ರಯತ್ನಿಸುತ್ತಿದೆ. ಇದರ ಜತೆಗೆ, ಮಜೀದ್‌ಗೆ ಕೌನ್ಸೆಲಿಂಗ್ ನೀಡಲೂ ಎನ್‌ಐಎ ನಿರ್ಧರಿಸಿದೆ.
ಇಸಿಸ್ ಹೊಸ ತಲೆನೋವು: ಐಬಿ
ಪಾಕಿಸ್ತಾನದ ಮೂಲದ ಉಗ್ರ ಸಂಘಟನೆಗಳ ಜತೆಗೆ ಈಗ ಭಾರತಕ್ಕೆ ಇಸಿಸ್ ಹೊಸ ತಲೆನೋವಾಗಿ ಪರಿಣಮಿಸಿದೆ. ಇರಾಕ್ ಮತ್ತು ಸಿರಿಯಾ ಜಿಹಾದಿ ಹಿಂಸಾಚಾರಕ್ಕೆ ಹೊಸ ವೇದಿಕೆಯಾಗುತ್ತಿದೆ. ಅಲ್ಲಿನ ಯುದ್ಧಭೂಮಿಯಿಂದ ಭಾರತದ ಯುವಕರು ದೇಶಕ್ಕೆ ವಾಪಸಾಗುವುದು ಭದ್ರತೆಗೆ ಹೊಸ ಸವಾಲಾಗಿ ಪರಿಣಮಿಸಲಿದೆ ಎಂದು ಇಂಟೆಲಿಜೆನ್ಸ್ ಬ್ಯುರೋ(ಐಬಿ) ನಿರ್ದೇಶಕ ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ಇಂಟೆಲಿಜೆನ್ಸ್ ಬ್ಯುರೋ ಆಯೋಜಿಸಿದ್ದ ಎಲ್ಲ ರಾಜ್ಯಗಳ ಡಿಜಿಪಿಗಳು, ಐಜಿಪಿಗಳ 49ನೇ ಸಮಾವೇಶದಲ್ಲಿ ಇಬ್ರಾಹಿಂ ಹೇಳಿದ್ದಾರೆ. ಉಗ್ರರ ನೇಮಕ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ. ಭದ್ರತಾ ಸಂಸ್ಧೆಗಳು ಸೈಬರ್ ಚಟುವಟಿಕೆ ಕುರಿತು ಹೆಚ್ಚು ಅಲರ್ಟ್ ಆಗಬೇಕಿದೆ ಎಂದಿದ್ದಾರೆ ಇಬ್ರಾಹಿಂ.
Advertisement