
ಸುಕ್ಮಾ: ನಕ್ಸಲರು ನಡೆಸಿದ ದಿಢೀರ್ ದಾಳಿಯಿಂದಾಗಿ ಛತ್ತೀಸ್ ಘಡದಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ 13 ಮಂದಿ ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಕ್ಮಾ ಜಿಲ್ಲೆಯಿಂದ ಸುಮಾರು 450 ಕಿ.ಮೀ ದೂರದಲ್ಲಿ ರಾಯ್‌ಪುರದಲ್ಲಿರುವ ಸಿಆರ್‌ಪಿಎಫ್ ಯೋಧರ ಶಿಬಿರವನ್ನು ಗುರಿಯಾಗಿಸಿಕೊಂಡು ನಕ್ಸಲರು ದಾಳಿ ನಡೆಸಿದ್ದು, ಸುಮಾರು 40ಕ್ಕೂ ಹೆಚ್ಚು ಮಂದಿ ನಕ್ಸಲರು ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದಾರೆ. ಈ ವೇಳೆ ಶಿಬಿರದ ಇಬ್ಬರು ಅಧಿಕಾರಿಗಳು ಸೇರಿದಂತೆ ಕನಿಷ್ಟ 13 ಮಂದಿ ಸಿಆರ್‌ಪಿಎಫ್ ಸಿಬ್ಬಂದಿಗಳು ಧಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ಮೂಲಗಳ ಪ್ರಕಾರ ಈ ವರ್ಷದಲ್ಲಿ ನಕ್ಸಲರು ನಡೆಸಿದ ಅತಿ ದೊಡ್ಡ ಪ್ರಮಾಣದ ದಾಳಿ ಇದಾಗಿದ್ದು, ಸುಮಾರು 25ರಿಂದ 50 ಮಂದಿ ನಕ್ಸಲರು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ನವೆಂಬರ್ ತಿಂಗಳಿನಲ್ಲಿಯೂ ಸುಕ್ಮಾ ಜಿಲ್ಲೆಯ ದಟ್ಟಡವಿಯಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಗಾಯಗೊಂಡ ಯೋಧರನ್ನು ರವಾನೆ ಮಾಡಲು ಆಗಮಿಸಿದ್ದ ಸೇನಾ ಹೆಲಿಕಾಪ್ಟರ್ ಮೇಲೆಯೇ ನಕ್ಸಲರು ಗುಂಡಿನ ಮಳೆಗರೆದಿದ್ದರು. ಈ ವೇಳೆ 6 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಓರ್ವ ಐಎಎಫ್ ಕಮಾಂಡೋ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ನಕ್ಸಲರು ಮತ್ತೆ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ.
(ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ)
Advertisement