
ಕೋಲ್ಕತ್ತಾ: ಬುರ್ದ್ವಾನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಸೋಮವಾರ ಮತ್ತೆ ಐವರನ್ನು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಬುರ್ದ್ವಾನ್‌ನ ಮನೆಯೊಂದರಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಶಂಕಿತ ಉಗ್ರರರನ್ನು ಬಂಧಿಸಿದ್ದಾರೆ. ಈ ಪೈಕಿ ಬಂಧನಕ್ಕೀಡಾಗಿರುವ ಮೂವರು ಮಹಿಳೆಯರು ಬಾಂಗ್ಲಾದೇಶದ ಮೂಲದವರು ಎಂದು ತಿಳಿದು ಬಂದಿದೆ.
ಬುರ್ದ್ವಾನ್ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಇವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಓರ್ವ ಮಹಿಳೆಯ ಬಳಿಯಿದ್ದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನಕಲಿ ಎಂಬ ಶಂಕೆ ಪೊಲೀಸರಿಗೆ ಮೂಡಿದೆ. ಹೀಗಾಗಿ ಕೂಡಲೇ ಎಲ್ಲಾ ಐವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಬುರ್ದ್ವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇವರಿಗೆ ಸಂಬಂಧವಿದೆ ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಎಂಹೆಚ್ ಮಿರ್ಜಾ ಅವರು, ಶಂಕೆಯ ಮೇರೆಗೆ ಐವರನ್ನು ಬಂಧಿಸಲಾಗಿದೆ. ಇವರಿಗೆ ಉಗ್ರ ಸಂಘಟನೆಗಳೊಂದಿಗೆ ಸಂಬಂಧವೇನಾದರೂ ಇದೇಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಅಕ್ಟೋಬರ್ 2ರಂದು ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿರುವ ಖಗ್ರಾಗರ್ ಎಂಬ ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದರು. ಬಾಂಬ್ ಸ್ಫೋಟಗೊಂಡ ಮನೆ ತೃಣಮೂಲ ಕಾಂಗ್ರೆಸ್ ಮುಖಂಡನೊಬ್ಬನ ಮನೆ ಎಂದು ಮೂಲಗಳು ತಿಳಿಸಿವೆ.
Advertisement