

ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಂಪುಟ ವಿಸ್ತರಣೆ ಏ.8ರಂದು ನಡೆಯುವ ಸಾಧ್ಯತೆಯಿದೆ. ಮೂವರು ಸಹಾಯಕ ಸಚಿವರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಗಲಿದ್ದು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತು ಲ್ಲಾರನ್ನು ಸಂಪುಟದಿಂದ ಕೈಬಿಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರು ಮೋದಿ ಸಂಪುಟ ಸೇರಲಿದ್ದಾರೆ ಎಂದುಹೇಳಲಾಗಿದೆ. ಸಹಾಯಕ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ, ರಾಜೀವ್ ಪ್ರತಾಪ್ ರೂಡಿ, ಮನೋಜ್ ಸಿನ್ಹಾ ಅವರಿಗೆ ಬಡ್ತಿ ಸಿಗಲಿದೆ. ಇದೇ ವೇಳೆ, ಹಣಕಾಸು ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಅವರಿಗೆ ಕಾರ್ಪೋರೇಟ್ ವ್ಯವಹಾರಗಳ ಹೆಚ್ಚುವರಿ ಹೊಣೆ ನೀಡುವ ಸಾಧ್ಯತೆಯಿದೆ. ಜತೆಗೆ, ಶಿವಸೇನೆಯ ಅನಿಲ್ ದೇಸಾಯಿ ಅವರಿಗೆ ಸಹಾಯಕ ಸಚಿವ ಸ್ಥಾನ (ಸ್ವತಂತ್ರ ಖಾತೆ) ಸಿಗಬಹುದು ಎಂದೂ ಮೂಲಗಳು ತಿಳಿಸಿವೆ.