

ನಲ್ಗೊಂಡಾ/ಭೋಪಾಲ್: ಬೆಂಗಳೂರು - ಗುವಾಹಟಿ ಎಕ್ಸ್‍ಪ್ರೆಸ್ ರೈಲು ಸ್ಪೋಟ ಸೇರಿದಂತೆ ಅನೇಕ ವಿಧ್ವಂಸಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಸಿಮಿ ಉಗ್ರರಿಬ್ಬರನ್ನು ತೆಲಂಗಾಣ ಪೋಲೀಸರು ಶುಕ್ರವಾರ ರಾತ್ರಿ ಹೊಡೆದುರುಳಿಸಿದ್ದಾರೆ. ಮೃತ ಉಗ್ರರನ್ನು ಮೊಹಮ್ಮದ್ ಎಜಾಜುದ್ದೀನ್ ಮತ್ತು ಮೊಹಮ್ಮದ್ ಅಸ್ಲಾಂ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ವೇಳೆ ಪೊಲೀಸ್ ಕಾನ್ಸ್ ಟೇಬಲ್‍ವೊಬ್ಬರೂ ಮೃತಪಟ್ಟಿದ್ದಾರೆ.
ಎಜಾಜುದ್ದೀನ್ ಹಾಗೂ ಅಸ್ಲಾಂ ಮಧ್ಯ ಪ್ರದೇಶದ ಖಾಂಡ್ವಾ ನಗರದ ತಾಂತ್ಯಾ ಭೀಲ್ ಜೈಲಿನಿಂದ ಅ.3, 2013ರಂದು ಇತರೆ ಐವರು ಉಗ್ರರ ಜತೆಗೆ ತಪ್ಪಿಸಿ ಕೊಂಡಿದ್ದರು. ಆ ಬಳಿಕ ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಉಗ್ರರ ಚಲನವಲನಗಳ ಮೇಲೆ ಕರ್ನಾಟಕ ಸೇರಿ ಅನೇಕ ರಾಜ್ಯಗಳ ಪೋಲೀಸರು ಕಣ್ಣಿಟ್ಟಿ ದ್ದರು. ಈ ಇಬ್ಬರು ಉಗ್ರರು 2 ದಿನಗಳ ಹಿಂದಷ್ಟೇ ಸೂರ್ಯಪೇಟೆಯಲ್ಲಿ ಪೋಲೀಸರಿಬ್ಬರನ್ನು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಪೋಲೀಸರು ಖಚಿತ ಮಾಹಿತಿ ಮೇರೆಗೆ ನಲ್ಗೊಂಡಾ ಜಿಲ್ಲೆಯ ಸಿತಾರಾಮಪುರಂ ಗ್ರಾಮದ ಮನೆಯೊಂದರಮೇಲೆ ದಾಳಿ ನಡೆಸಿದರು. ಈ ವೇಳೆ ಪೋಲೀಸರ ಮೇಲೆ ದಾಳಿ ನಡೆಸಿದ ಉಗ್ರರು ಅಲ್ಲಿಂದ ತಪ್ಪಿಸಿಕೊಂಡರು. ಆದರೆ, ಪಟ್ಟುಬಿಡದ ಪೊಲೀಸರು ಜಾನಕಿಪುರಂ ವರೆಗೂ ಉಗ್ರರನ್ನು ಬೆನ್ನಟ್ಟಿ ಹೊಡೆದು ರುಳಿಸಿದರು. ಈ ವೇಳೆ ಉಗ್ರರು ಪೋಲೀಸರ ಮೇಲೆ ಎರಡನೇ ಸುತ್ತಿನ ಗುಂಡಿನ ದಾಳಿಯಲ್ಲಿ ಕಾನ್ಸ್‍ಟೇಬಲ್ ನಾಗರಾಜು ಸ್ಥಳದಲ್ಲೇ ಮೃತಪಟ್ಟರೆ ಇನ್ಸ್‍ಪೆಕ್ಟರ್ ಬಾಲಾ ಗಂಗಿ ರೆಡ್ಡಿ, ಸಬ್ ಇನ್ಸ್‍ಪೆಕ್ಟರ್ ಸಿದ್ದಯ್ಯ ಅವರು ಗಂಭೀರ ಗಾಯಗೊಂಡಿದ್ದಾರೆ.
ಕರ್ನಾಟಕದಲ್ಲೂ ಅಡಗಿದ್ದರು?
ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿ ಕೊಂಡಿದ್ದ ಉಗ್ರರು ಬಳಿಕ ಕರ್ನಾಟಕ, ತಮಿಳುನಾಡು, ತೆಲಂಗಾಣ, ರಾಜಾಸ್ಥಾನ, ಉತ್ತರಪ್ರದೇಶ, ಮಹಾರಾಷ್ಟ್ರ ಹೀಗೆ ವಿವಿಧ ರಾಜ್ಯಗಳಲ್ಲಿ ತಲೆ ಮರೆಸಿಕೊಂಡಿದ್ದರು. ಕರ್ನಾಟಕದ ಹೊಸಪೇಟೆ ಮತ್ತು ಹುಬ್ಬಳ್ಳಿಯಲ್ಲೂ ಕೆಲ ಕಾಲ ತಂಗಿದ್ದರು. ಆದರೆ, ಪೋಲೀಸರು ಇನ್ನೇನು ವಶಕ್ಕೆ ತೆಗೆದುಕೊಳ್ಳಬೇಕು ಎನ್ನುವಾಗ ಪರಾರಿಯಾಗಿದ್ದರು. ಈ ಉಗ್ರರ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಕರ್ನಾಟಕ ಸೇರಿ ಅನೇಕ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ತಲೆಮೆರಿಸಿಕೊಂಡಿದ್ದ ಈ ಉಗ್ರರಿಗೆ ಭಾರತದ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗುವ ಹೊಣೆಯನ್ನು ಪಾಕಿಸ್ತಾನದ ಐಎಸ್‍ಐ ನೀಡಿತ್ತು ಎಂದು ಗೃಹ ಸಚಿವಾಲಯ ಹೇಳಿಸಿತ್ತು. ಕಳೆದ ವರ್ಷ ಮೇ 1ರಂದು ಚೆನ್ನೈನಲ್ಲಿ ನಡೆದ ಬೆಂಗಳೂರು- ಗುವಾಹಟಿ ರೈಲು ಸ್ಪೋಟದಲ್ಲೂ ಈ ಉಗ್ರರ ಪಾತ್ರದ ಕುರಿತು ಎನ್‍ಐಎಗೆ ಪುರಾವೆಗಳು ಲಭ್ಯವಾಗಿತ್ತು.ಇದಲ್ಲದೆ, ಪುಣೆ, ಬಿಜ್ನೋರು ಸ್ಪೋಟದಲ್ಲೂ ಜೈಲಿನಿಂದ ತಪ್ಪಿಸಿಕೊಂಡಿದ್ದ ಈ ಉಗ್ರರ ಪಾತ್ರವನ್ನು ಸಾಬೀತುಪಡಿಸುವ
ಸಾಕ್ಷ್ಯಗಳು ಲಭ್ಯವಾಗಿತ್ತು.
ಮೃತ ಉಗ್ರರ ಮೇಲಿರುವ ಆರೋಪಗಳು
ತೆಲಂಗಾಣದ ಕರೀಂನಗರ ಬ್ಯಾಂಕ್ ದರೋಡೆ
ಬೆಂಗಳೂರು- ಗುವಾಹಟಿ ರೈಲು ಸ್ಪೋಟ
ಪುಣೆ, ಬಿಜ್ನೋರ್ ಸ್ಪೋಟ
ಸೂರ್ಯಪೇಟೆ ನಗರ ಶೂಟೌಟ್