ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂಬಂಧಿ ಹತ್ಯೆ

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂಬಂಧಿಯೊಬ್ಬರಿಗೆ ಕಿಡಿಗೇಡಿಗಳು ಗುಂಡು ಹಾರಿಸಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿರುವ ಘಟನೆ ವಾರಣಾಸಿಯಲ್ಲಿ ಬುಧವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಕನೌ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂಬಂಧಿಯೊಬ್ಬರಿಗೆ ಕಿಡಿಗೇಡಿಗಳು ಗುಂಡು ಹಾರಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಾರಣಾಸಿಯಲ್ಲಿ ಬುಧವಾರ ನಡೆದಿದೆ.

ರಾಜನಾಥ್ ಸಿಂಗ್ ಸಂಬಂಧಿಯಾಗಿರುವ ಅರವಿಂದ್ ಸಿಂಗ್ ಅವರು ಪೆಟ್ರೋಲ್ ಬಂಕ್ ಮಾಲೀಕರಾಗಿದ್ದು, ಕಾರಿನಲ್ಲಿ ಏರ್ ಪೋರ್ಟ್ ಗೆ ಹೋಗಬೇಕಿದ್ದ ತಮ್ಮ ಪತ್ನಿಯನ್ನು ಡ್ರಾಪ್ ಮಾಡಿ ಪೂಲ್ಪುರದ ಮುಕ್ಸೂದನ್ ಪಟ್ಟಿ ಪ್ರದೇಶದ ಮೂಲಕ ಮನೆಗೆ ತೆರಳುತ್ತಿದ್ದರು.

ಈ ವೇಳೆ ಬೈಕ್ ನಲ್ಲಿ ಬಂದ ಮೂವರು ಅನಾಮಿಕ ವ್ಯಕ್ತಿಗಳಲ್ಲಿ ಒಬ್ಬರು ಬಲವಂತವಾಗಿ ಅರವಿಂದ್ ಸಿಂಗ್ ಅವರ ಕಾರನ್ನು ನಿಲ್ಲಿಸಿ ಕಾರಿನೊಳಗೆ ಹೋಗಿದ್ದಾನೆ. ನಂತರ ಅನಾವಶ್ಯಕವಾಗಿ ಅರವಿಂದ್ ಸಿಂಗ್ ಅವರೊಂದಿಗೆ ಮಾತಿನ ಜಗಳಕ್ಕಿಳಿದು, ಬಳಿಕ ಇದ್ದಕ್ಕಿದ್ದಂತೆ ಅರವಿಂದ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟು ನೇರವಾಗಿ ಅರವಿಂದ್ ಸಿಂಗ್ ಅವರ ಕತ್ತಿಗೆಗೆ ಬಿದ್ದ ಕಾರಣ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಕಸಹಾಕಲು ಬಂದಿದ್ದ ಓರ್ವ ಮಹಿಳೆ ಈ ದೃಶ್ಯವನ್ನು ಕಂಡು, ಗಾಬರಿಗೊಂಡು ಕೂಗಿದ್ದಾಳೆ. ಮಹಿಳೆಯ ಕೂಗು ಕೇಳಿಸಿಕೊಂಡ ಅನಾಮಿಕರು ಕೈಯಲ್ಲಿದ್ದ ಪಿಸ್ತೂಲನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದು, ಅರವಿಂದ್ ಸಿಂಗ್ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ಕುರಿತಂತೆ ಈ ವರೆಗೂ ಯಾರೊಬ್ಬ ಆರೋಪಿಯೂ ದೊರಕಿಲ್ಲ. ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಎ.ಕೆ.ಪಾಂಡೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com