ಭಾರತೀಯರಿಗಾಗಿ ಪಾಕ್ ವಿಶೇಷ ವಿಮಾನ
ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗಿರುವ ಯೆಮೆನ್‍ನಿಂದ ರಕ್ಷಿಸಲ್ಪಟ್ಟ 11 ಭಾರತೀಯರನ್ನು ವಿಶೇಷ ವಿಮಾನದ ಮೂಲಕ ಕಳುಹಿಸಿಕೊಡುವ ಪಾಕಿಸ್ತಾನದ ಪ್ರಸ್ತಾಪವನ್ನು ಭಾರತ ಒಪ್ಪಿಕೊಂಡಿದೆ. ಯುದ್ಧಪೀಡಿತ ಯೆಮೆನ್‍ನಿಂದ ಭಾರತ ಸೇರಿ ಅನೇಕ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಯುದ್ದ ನೌಕೆಗಳನ್ನು ಕಳುಹಿಸಿಕೊಟ್ಟಿವೆ. ಈ ವೇಳೆ ಇತರ ದೇಶದ ಪ್ರಜೆಗಳನ್ನೂ ನೌಕಾ ಸಿಬ್ಬಂದಿ
ರಕ್ಷಿಸಿದ್ದಾರೆ. ಪಾಕಿಸ್ತಾನ ಕಳುಹಿಸಿಕೊಟ್ಟಿದ್ದ ಯುದ್ಧ ನೌಕೆ 11 ಭಾರತೀಯರನ್ನು ರಕ್ಷಿಸಿತ್ತು.
ಆ ನೌಕೆ ಮಂಗಳವಾರ ಕರಾಚಿ ತಲುಪಿದೆ. ಈ 11 ಮಂದಿಯನ್ನು ಭಾರತಕ್ಕೆ ಕಳುಹಿಸಲು ವಿಶೇಷ ವಿಮಾನದ ಸೌಲಭ್ಯ ಕಲ್ಪಿಸಲು ಪ್ರಧಾನಿ ನವಾಜ್ ಷರೀಫ್ ಇಚ್ಛಿಸಿದ್ದರು.
ಈ ಮಾಹಿತಿಯನ್ನು ದೆಹಲಿಯಲ್ಲಿರುವ ಪಾಕ್ ರಾಯಭಾರಿ ಕಚೇರಿಯು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್ ಅಕ್ಬರುದ್ದೀನ್ ಅವರಿಗೆ ಮಾಹಿತಿ ನೀಡಿದೆ. ಪಾಕಿಸ್ತಾನದ ಪ್ರಸ್ತಾಪವನ್ನು ಭಾರತ ಒಪ್ಪಿಕೊಂಡಿರುವುದಾಗಿ ಅಕ್ಬರುದ್ದೀನ್ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಭಾರತದ ನೆರವು ಕೇಳಿದ ಅಮೆರಿಕ:
ಯೆಮೆನ್ ನಲ್ಲಿ ದೇಶದ ನಾಗರಿಕರ ರಕ್ಷಣೆಗೆ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ನೌಕಾ ಸೇನೆಯ ನೆರವನ್ನು ಜರ್ಮನಿ,ಫ್ರಾನ್ಸ್, ಸ್ವೀಡನ್‍ನಂಥ ದೇಶಗಳೂ
ಕೇಳಿವೆ. ಇದಕ್ಕಾಗಿ ಈ ದೇಶಗಳುಯೆಮೆನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ದೇಶದ ಪ್ರಜೆಗಳಿಗೆ ಸೂಚಿಸಿವೆ.
ಯಾಕೆ ಯಶಸ್ಸು?
ಯೆಮೆನ್‍ನಲ್ಲಿ ಭಾರತ ನಡೆಸುತ್ತಿರುವ ಕಾರ್ಯಾಚರಣೆಗೆ ಭಾರಿ ಯಶಸ್ಸು ಸಿಗುತ್ತಿರುವುದು ವಿಶ್ವದ ಗಮನ ಸೆಳೆದಿದೆ. ಆಂತರಿಕ ಸಂಘರ್ಷದಲ್ಲಿ ನಲುಗಿರುವ ಯೆಮೆನ್‍ನಲ್ಲಿ ರಕ್ಷ ಣಾ ಕಾರ್ಯಾಚರಣೆ ಎಲ್ಲ ದೇಶಗಳಿಗೂ ಸವಾಲು. ಯಾಕೆಂದರೆ ಈ ಹೋರಾಟ ಗಂಭೀರವಾದದ್ದಷ್ಟೇ ಅಲ್ಲ, ಈ ಯುದ್ಧದಲ್ಲಿ ಅನೇಕ ರಾಷ್ಟ್ರಗಳೂ ಭಾಗಿಯಾ ಗಿವೆ. ಶಿಯಾ
ಹೌತಿ ಬಂಡುಕೋರರು, ಅಲ್‍ಖೈದಾ,ಯೆಮೆನ್ ಸರ್ಕಾರ ಮತ್ತು ಸೌದಿ ಅರೇಬಿಯಾ ಸಂಘರ್ಷದಲ್ಲಿ ಪಾಲ್ಗೊಂಡಿದೆ. ಹಾಗಾಗಿ ರಕ್ಷಣಾ ತಂಡಗಳಿಗೆ ಇಲ್ಲಿ ಯಾರು, ಯಾರ
ಕಡೆಗಿದ್ದಾರೆ ಎನ್ನುವುದೇ ಅರಿವಾಗದಂಥ ಗೊಂದಲದ ಸ್ಥಿತಿ ಇದೆ. ಆದರೆ, ಭಾರತ ರಕ್ಷಣಾ ಕಾರ್ಯಾಚರಣೆ ಯಶಸ್ಸುಗಳಿಸಲು ಮೋದಿ ಅವರು ಸೌದಿ ಜತೆಗೆ ಹೊಂದಿರುವ ನೇರ
ರಾಜತಾಂತ್ರಿಕ ಸಂಬಂಧ, ಇರಾಕ್ ಸಂಘರ್ಷದ ವೇಳೆ ಪಡೆದ ಅನುಭವ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಆಂತರಿಕ ಸಂಘರ್ಷದಲ್ಲಿ ಪಾಲಿಸಿಕೊಂಡು ಬಂದಿದ್ದ ತಟಸ್ಥ ನೀತಿ
ಭಾರತದ ರಕ್ಷಣಾ ಕಾರ್ಯಕ್ಕೆ ಅನುಕೂಲಕರವಾಗಿ ಪರಿಗಣಿಸಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ