ಯೋಗ
ಯೋಗ

'ಯೋಗ' ಭಾರತೀಯ ಪರಂಪರೆ; ಯುನೆಸ್ಕೋ ಘೋಷಣೆ?

ಸದೃಢ ಆರೋಗ್ಯ ಮತ್ತು ಆಧ್ಯಾತ್ಮಿಕ ಚಿಂತನೆಗೆ ಪ್ರೇರಕ ಶಕ್ತಿಯಾಗಿರುವ ಯೋಗವನ್ನು ಭಾರತೀಯ ಸಂಸ್ಕೃತಿಯ ಪರಂಪರೆ ಎಂದು ವಿಶ್ವಸಂಸ್ಥೆ ಘೋಷಣೆ ಮಾಡುವ ಸಂಭವವಿದೆ.

ಲಂಡನ್: ಸದೃಢ ಆರೋಗ್ಯ ಮತ್ತು ಆಧ್ಯಾತ್ಮಿಕ ಚಿಂತನೆಗೆ ಪ್ರೇರಕ ಶಕ್ತಿಯಾಗಿರುವ ಯೋಗವನ್ನು ಭಾರತೀಯ ಸಂಸ್ಕೃತಿಯ ಪರಂಪರೆ ಎಂದು ವಿಶ್ವಸಂಸ್ಥೆ ಘೋಷಣೆ ಮಾಡುವ ಸಂಭವವಿದೆ.

ವಿಶ್ವಸಂಸ್ಥೆಯ ಯುನೆಸ್ಕೋ ಮಹಾನಿರ್ದೇಶಕ ಇರಿನಾ ಬೊಕಾವೊ ಇದನ್ನು ಖಚಿತಪಡಿಸಿದ್ದು, ಶೀಘ್ರದಲ್ಲೇ ಯೋಗವನ್ನು ಭಾರತದ ಸಂಸ್ಕೃತಿಯ ಪರಂಪರೆ ಎಂದು ತೀರ್ಮಾನಿಸಲಿದ್ದು, ಶೀಘ್ರದಲ್ಲೆ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದರು.

ವಿಶ್ವಸಂಸ್ಥೆಯು ಈಗಾಗಲೇ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಂದು ಘೋಷಣೆ ಮಾಡಿದೆ. ಜಗತ್ತಿನ 193 ರಾಷ್ಟ್ರಗಳ ಪೈಕಿ 175 ರಾಷ್ಟ್ರಗಳು ಯೋಗವನ್ನು ಒಪ್ಪಿಕೊಂಡಿವೆ. ಹೀಗಾಗಿ ಇದಕ್ಕೆ ಜಾಗತಿಕ ಮನ್ನಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಭೌತಿಕವಾಗಿ ಹಾಗೂ ಮಾನಸಿಕವಾಗಿ ಯೋಗದಿಂದ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಒತ್ತಡದ ಸಂದರ್ಭದಲ್ಲಿ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದೆಂದು ವೈದ್ಯಕೀಯ ವಿಜ್ಞಾನದಲ್ಲೂ ಸಾಬೀತಾಗಿರುವುದರಿಂದ ಇದಕ್ಕೆ ಇನ್ನಷ್ಟು ಒತ್ತು ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ದೇಹ ಮತ್ತು ಆತ್ಮ ಪರಿಶುದ್ಧವಾಗಿರಬೇಕಾದರೆ ಯೋಗಾಭ್ಯಾಸದಿಂದ ಮಾತ್ರ ಸಾಧ್ಯ ಎಂಬುದು ಅನೇಕರ ವಾದವಾಗಿದೆ. ಯೋಗಾಭ್ಯಾಸ ಮಾಡುತ್ತಿರುವವರು ಸದೃಢಕಾಯ ಹೊಂದಿದ್ದಾರೆ.  ಹೀಗಾಗಿ ಯೋಗಾಭ್ಯಾಸ ಅಗತ್ಯ ಎಂಬುದನ್ನು ಮನಗಂಡು ವಿಶ್ವಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com