ಗಡಿ ದಾಟಲು ಉಗ್ರರ ಯತ್ನ: ಬಿಎಸ್ ಎಫ್ ಯೋಧರಿಂದ ಪ್ರತಿ ದಾಳಿ

ಪಾಕಿಸ್ತಾನ ಗಡಿಯಿಂದ ಭಾರತೀಯ ಗಡಿಯೊಳಗೆ ಒಳನುಸುಳಲು ಯತ್ನಿಸಿದ ಉಗ್ರರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು...
ಇಂಡೋ-ಪಾಕ್ ಗಡಿ
ಇಂಡೋ-ಪಾಕ್ ಗಡಿ

ಅಟ್ಟಾರಿ (ಅಮೃತಸರ): ಪಾಕಿಸ್ತಾನ ಗಡಿಯಿಂದ ಭಾರತ ಗಡಿಯೊಳಗೆ ಒಳ ನುಸುಳಲು ಯತ್ನಿಸಿದ ಉಗ್ರರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.

ಪಂಜಾಬಿನ ಅಮೃತಸರ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಅಟ್ಟಾರಿ ಬಾರ್ಡರ್ ಚೆಕ್ ಪೋಸ್ಟ್ ನಿಂದ ಸುಮಾರು 5-6 ಕಿ.ಮೀ ದೂರದಲ್ಲಿರುವ ಡೋಕ್ ಬಾರ್ಡರ್ ಔಟ್ ಪೋಸ್ಟ್ನಲ್ಲಿ ಗುಂಡಿನ ಚಕಮಕಿಯಾಗಿದೆ. ಘಟನೆಯಲ್ಲಿ ಮೂವರು ಬಿಎಸ್ ಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಹಿರಿಯ ಸೇನಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಅಲ್ಲದೆ ಉಗ್ರರು ಒಳನುಸುಳಿರುವ ಶಂಕೆಯ ಮೇರೆಗೆ ಗಡಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದು, ಪಂಜಾಬಿನಲ್ಲಿರುವ ಇಂಡೋ-ಪಾಕ್ ಬಾರ್ಡರ್ ನಲ್ಲಿ ಪ್ರಸ್ತುತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿಂದೆ ಇದೇ ಪಂಜಾಬ್ ಬಾರ್ಡರ್ ನಲ್ಲಿ ಬಿಎಸ್ ಎಫ್ ಯೋಧರು ಸುಮಾರು 125 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದರು. ಕಳೆದ 1 ವರ್ಷದಲ್ಲಿ ಬಿಎಸ್ ಎಫ್ ಒಟ್ಟು 361 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿತ್ತು.

ಈ ಮಾರ್ಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾದಕವಸ್ತುಗಳು ರವಾನೆಯಾಗುತ್ತಿದ್ದ ಹಿನ್ನಲೆಯಲ್ಲಿ ಭಾರತೀಯ ಗಡಿಯಲ್ಲಿರುವ ಫೆನ್ಸಿಂಗ್ (ಕಬ್ಬಿಣದ ತಂತಿ ಬೇಲಿ)ಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಆ ಬಳಿಕ ಇಲ್ಲಿ ಇಂತಹ ಘಟನೆಗಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಇತ್ತೀಚೆಗೆ ಕಳ್ಳಸಾಗಣೆದಾರರು ಮತ್ತು ಉಗ್ರರು ಮತ್ತೆ ತಮ್ಮ ಆಟಾಟೋಪ ಶುರುಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com