ಉ.ಪ್ರದೇಶ ಸಚಿವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

2007ರ ಪೊಲೀಸ್ ಒತ್ತೆಯಾಳು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಇಂಧನ ಸಚಿವ ಯಾಸಿರ್ ಷಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ...
ಸಚಿವ ಯಾಸಿರ್ ಷಾ (ಸಂಗ್ರಹ ಚಿತ್ರ)
ಸಚಿವ ಯಾಸಿರ್ ಷಾ (ಸಂಗ್ರಹ ಚಿತ್ರ)

ಲಖನೌ: 2007ರ ಪೊಲೀಸ್ ಒತ್ತೆಯಾಳು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಇಂಧನ ಸಚಿವ ಯಾಸಿರ್ ಷಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.

2007ರಲ್ಲಿ ಪೊಲೀಸರನ್ನು ಒತ್ತೆಯಾಳುಗಳಾಗಿ ಸೆರೆ ಇರಿಸಿಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಬಾರಾಬಂಕಿಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ (ಸಿಜೆಎಂ) ಸರ್ವಜೀತ್ ಸಿಂಗ್ ಅವರು ಸಚಿವ ಯಾಸೀರ್ ಷಾ ವಿರುದ್ಧ ವಾರಂಟ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಯಾಸಿರ್ ಷಾ ಹಾಜರಾಗಬೇಕು ಎಂಬ ನ್ಯಾಯಾಲಯದ ಆದೇಶವಿದ್ದರೂ ಕಲಾಪಕ್ಕೆ ಹಾಜರಾಗದ ಸಚಿವರ ವಿರುದ್ಧ ನ್ಯಾಯಾಧೀಶರು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದಾರೆ.

2007ರಲ್ಲಿ ಅಪಾರ ಪ್ರಮಾಣದ ಮಾದಕವಸ್ತುಗಳನ್ನು ಇಟ್ಟುಕೊಂಡಿರುವ ಹಿನ್ನಲೆಯಲ್ಲಿ ಉತ್ತರಪ್ರದೇಶದ ನಾನ್ ಪರಾ ಪೊಲೀಸರು ಸ್ಥಳೀಯ ಮುಖಂಡನೋರ್ವನನ್ನು ಬಂಧಿಸಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ರಾಜ್ಯ ಇಂಧನ ಸಚಿವ ಯಾಸಿರ್ ಷಾ ಠಾಣೆಗೆ ತೆರಳಿ ಇಡೀ ಠಾಣೆಯ ಪೊಲೀಸರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದರು. ಯಾಸಿರ್ ಷಾ ಮಾತ್ರವಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ 32 ಮಂದಿ ವಿರುದ್ಧ ಕೂಡ ಪ್ರಕರಣ ದಾಖಲಾಗಿತ್ತು.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಯಾಸಿರ್ ಶಾರನ್ನು ಮೇ 12ರೊಳಗೆ ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ ಸಚಿವ ಯಾಸಿರ್ ಷಾ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ಯಾಸಿರ್ ಷಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com