ಕಾರು ಕಳ್ಳತನ ಪ್ರಕರಣ: ಕಾಂಗ್ರೆಸ್ ಶಾಸಕಿ ರುಮಿನಾಥ್ ಬಂಧನ
ಗುವಾಹತಿ: ಅಸ್ಸಾಂ ನ ಕಾಂಗ್ರೆಸ್ ಶಾಸಕಿ ರುಮಿನಾಥ್ ಅವರನ್ನು ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ.
ಕಾರುಕಳ್ಳತನ ಮಾಡುವ ಕುಖ್ಯಾತನೊಂದಿಗೆ ಸಂಪರ್ಕವಿರಿಸಿಕೊಂಡಿರುವ ಆರೋಪದ ಮೇರೆಗೆ ರುಮಿನಾಥ್ ಅವರನ್ನು ಗುವಾಹತಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಸುಮಾರು 7 ಗಂಟೆಯ ವೇಳೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ರುಮಿನಾಥ್ ಅವರನ್ನು ಅವರ ಮನೆಯಿಂದಲೇ ಬಂಧಿಸಿದ್ದಾರೆ. ಶಾಸಕಿ ರುಮಿನಾಥ್ ಅವರ ವಿರುದ್ಧ ಐಪಿಸಿ ಸೆಕ್ಷನ್ 120(B) (ಕ್ರಿಮಿನಲ್ ಸಂಚು), 420 (ಮೋಸ), 212 ( ಉದ್ದೇಶಪೂರ್ವಕವಾಗಿ ಅಪರಾಧದಲ್ಲಿ ತೊಡಗುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾಪತ್ತೆಯಾಗಿದ್ದ ರುಮಿನಾಥ್ ಅವರು ಸೋಮವಾರ ಸುದ್ದಿಗೋಷ್ಠಿಯನ್ನು ನಡೆಸಿ ತಾವು ಎಲ್ಲಿಯೂ ಓಡಿಹೋಗಿಲ್ಲ ಎಂದು ಹೇಳಿದ್ದರು.
ಪ್ರಕರಣದಲ್ಲಿ ವಿನಾಕಾರಣ ತನ್ನನ್ನು ಸಿಲುಕಿಸಲು ಯತ್ನಿಸಲಾಗುತ್ತಿದೆ. ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯದಲ್ಲಿ ಮನವಿ ಮಾಡಿದಾಕ್ಷಣ ನಾನು ತಪ್ಪಿತಸ್ಥಳಲ್ಲ. ನ್ಯಾಯಾಂಗ ವಿಚಾರಣೆಯಲ್ಲಿ ನಾನು ತಪ್ಪಿತಸ್ಥಳು ಎಂದು ರುಜುವಾತಾದರೆ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಶಾಸಕಿ ರುಮಿನಾಥ್ ಹೇಳಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರುಮಿನಾಥ್ ಅವರ 2 ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಅಸ್ಸಾಂ ಹೈಕೋರ್ಟ್ ವಜಾಗೊಳಿಸಿತ್ತು.
ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡದೆಯೇ ಮತ್ತೊಂದು ಮದುವೆ ಮಾಡಿಕೊಳ್ಳುವ ಮೂಲಕ ರುಮಿನಾಥ್ ಅವರು ದೇಶಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದರು. ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಅದೇ ಧರ್ಮದ ಜಾಕಿ ಝಕೀರ್ ಎಂಬಾತನನ್ನು ರುಮಿನಾಥ್ ಅವರು ವಿವಾಹವಾಗಿದ್ದರು. ಇದೇ ಕಾರಣಕ್ಕಾಗಿ ಈ ಹಿಂದೆ ಇವರ ಮೇಲೆ ಸಾರ್ವಜನಿಕ ದಾಳಿ ಕೂಡ ನಡೆದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ