
ಶ್ರೀನಗರ: ಪ್ರತ್ಯೇಕವಾದಿ ನಾಯಕರಾದ ಮೊಹಮ್ಮದ್ ಯಾಸೀನ್ ಮಲೀಕ್ ಹಾಗೂ ಮಸರತ್ ಆಲಂ ಭಟ್ ಅವರನ್ನು ಅವಾಂತಿಪುರದ ಬಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪ್ರತ್ಯೇಕವಾದಿ ನಾಯಕರಾದ ಮೊಹಮ್ಮದ್ ಯಾಸೀನ್ ಮಲೀಕ್ ಹಾಗೂ ಮಸರತ್ ಆಲಂ ಭಟ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತ್ರಾಲ್ ನಲ್ಲಿ ಇಬ್ಬರು ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅಲ್ಲಿನ ಸ್ಥಳಿಯರು ಪ್ರತಿಭಟನೆ ಕೈಗೊಂಡಿದ್ದರು. ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಸಂಘರ್ಷ ನಡೆದಿತ್ತು.
ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಶಂಕಿತ ಉಗ್ರನೆಂದು ಹತ್ಯೆಯಾದ ಯುವಕ ನಿರಪರಾಧಿ, ವಿನಾಕಾರಣ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಹುಡುಗನ ಕುಟುಂಬಸ್ಥರು ಮತ್ತು ಸ್ಥಳೀಯರು ಭದ್ರತಾ ಪಡೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ತ್ರಾಲ್‌ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟ ಖಾಲೀದ್ ಮುಜಫ್ಪರ್ ಅವರ ಅಂತಿಮ ಸಂಸ್ಕಾರದ ಬಳಿಕ ನೂರಾರು ಜನರು, ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಭದ್ರತಾ ಪಡೆಗಳು ಅಶ್ರವಾಯು ಷೆಲ್ ಪ್ರಯೋಗಿಸಿ ಪ್ರತಿಭಟನಾ ನಿರತರನ್ನು ಚದುರಿಸಿದ್ದರು. ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ಮಲೀಕ್ ಹಾಗೂ ಭಟ್ ಅವರನ್ನು ಅವಾಂತಿಪುರದ ಬಳಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement