
ನವದೆಹಲಿ: ನೇತಾಜಿ ಸಭಾಷ್‌ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳ ಬಹಿರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಬುಧವಾರ ವರದಿಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರು ಬರ್ಲಿನ್‌ನಲ್ಲಿ ಬೋಸ್ ಸಂಬಂಧ ಸೂರ್ಯ ಕುಮಾರ್ ಬೋಸ್ ಅವರಿಗೆ ರಹಸ್ಯ ಕಡತಗಳನ್ನು ಬಹಿರಂಗಪಡಿಸುವ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದ ಮಾರನೇ ದಿನವೇ ಕೇಂದ್ರ ಸರ್ಕಾರ ಈ ಸಂಬಂಧ ಸಂಪುಟ ಕಾರ್ಯದರ್ಶಿ ನೇತೃತ್ವದ ಆಂತರಿಕ ಸಚಿವರ ಸಮಿತಿ ರಚಿಸಿದೆ.
ವರದಿಗಳ ಪ್ರಕಾರ, ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ, ಗುಪ್ತಚರ ಇಲಾಖೆ ಮತ್ತು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸಹ ಈ ಸಮಿತಿಯಲ್ಲಿರಲಿದ್ದಾರೆ.
ಸುಭಾಷ್‌ಚಂದ್ರ ಬೋಸ್ ಅವರ ಸಾವಿನ ಕುರಿತ ಎಲ್ಲಾ ರಹಸ್ಯ ಕಡತಗಳನ್ನು ಸಮಿತಿ ಅಧ್ಯಯನ ಮಾಡಲಿದೆ. ಬಳಿಕ ಆ ದಾಖಲೆಗಳನ್ನು ಬಹಿರಂಗಪಡಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಈ ಮಧ್ಯೆ, ವಿದೇಶಗಳೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರುವಂತಹ ಕಡತಗಳನ್ನು ಬಹಿರಂಗಪಡಿಸದಂತೆ ಸಮಿತಿ ಸರ್ಕಾರಕ್ಕೆ ಸಲಹೆ ನೀಡಲಿದೆ.
ಬೋಸ್ ಕುಟುಂಬದ ವಿರುದ್ಧ ನೆಹರೂ ಸರ್ಕಾರ ಎರಡು ದಶಕಗಳ ಕಾಲ ನಡೆಸಿದ ಬೇಹುಗಾರಿಕೆ ವಿಚಾರ ಸೋರಿಕೆಯಾಗುತ್ತಿದ್ದಂತೆ ನೇತಾಜಿ ಸಾವಿನ ಕುರಿತ ರಹಸ್ಯ ದಾಖಲೆಗಳನ್ನು ಬಹಿರಂಗ ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿತ್ತು. ನಿನ್ನೆ ನೇತಾಜಿ ಕುರಿತ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಕೋಲ್ಕತಾದಲ್ಲಿ ಬೋಸ್ ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರು ರ್ಯಾಲಿ ಸಹ ನಡೆಸಿದ್ದರು.
Advertisement