'ಧೈರ್ಯವಾಗಿ ಮಗುವಿಗೆ ಜನ್ಮ ನೀಡಿ', ಗ್ಯಾಂಗ್ ರೇಪ್ ಸಂತ್ರಸ್ಥೆಗೆ ಕೋರ್ಟ್ ಸೂಚನೆ

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರಿಗೆ 'ಧೈರ್ಯವಾಗಿ ಹೋಗಿ, ಮಗುವಿಗೆ ಜನ್ಮ ನೀಡಿ' ಎಂದು ಗುಜರಾತ್ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರಿಗೆ 'ಧೈರ್ಯವಾಗಿ ಹೋಗಿ, ಮಗುವಿಗೆ ಜನ್ಮ ನೀಡಿ' ಎಂದು ಗುಜರಾತ್ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.

ಅತ್ಯಾಚಾರದಿಂದ 28 ವಾರಗಳ ಗರ್ಭಿಣಿಯಾಗಿರುವ ಮಹಿಳೆ, ತನಗೆ ಮಗು ಬೇಡ. ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಧೈರ್ಯವಾಗಿ ಮಗುವಿಗೆ ಜನ್ಮ ನೀಡಿ ಎಂದು ಹೇಳಿದೆ. ಅಲ್ಲದೆ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳದಂತೆ ನೋಡಿಕೊಳ್ಳಿ ಎಂದು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ.

'ನಾನು ಇಲ್ಲಿ ಕುಳಿತು ತೀರ್ಪು ನೀಡುವುದು ಸುಲಭ. ಆದರೆ ವಾಸ್ತವವಾಗಿ ಅತ್ಯಾಚಾರದ ಬಳಿಕ ಮಗುವಿಗೆ ಜನ್ಮ ನೀಡುವುದು ಅತ್ಯಂತ ಆಘಾತಕಾರಿ, ಅವಮಾನಕರ ಮತ್ತು ಭಯಾನಕ. ಭಾರತೀಯ ಸಮಾಜದಲ್ಲಿ ಅವರು ತಿರಸ್ಕಾರಕ್ಕೆ ಒಳಗಾಗುತ್ತಾರೆ. ಆದರೆ ನಾವು ಕಾನೂನನ್ನು ಗೌರವಿಸಬೇಕಿದೆ ಮತ್ತು ಇಂತಹ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಅಪಾಯಕಾರಿ ಎಂಬುದನ್ನು ಆ ಮಹಿಳೆ ಅರ್ಥ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಅವರು ಹೇಳಿದ್ದಾರೆ.

ಮಗುವನ್ನು ತನ್ನ ಗಂಡ ಮತ್ತು ಕುಟುಂಬ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ತನಗೆ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಜಿಲ್ಲಾ ನ್ಯಾಯಾಲಯ, 'ತುಂಬಾ ತಡವಾಗಿದೆ ಮತ್ತು ಈ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ನಿಮ್ಮ ಜೀವಕ್ಕೆ ಅಪಾಯ' ಎಂದು ಹೇಳಿತ್ತು. ಆದರೆ ಮಹಿಳೆ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಸೌರಾಷ್ಟ್ರದ ಮಹಿಳೆಯೊಬ್ಬರು ಕಳೆದ ವರ್ಷ ಜುಲೈನಲ್ಲಿ ಏಳು ಜನರ ತಂಡ ತನ್ನನ್ನು ಅಪಹರಿಸಿ, ಸುಮಾರು 10 ತಿಂಗಳು ಕಾಲ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 16ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆಗಾಗಲೆ ಮಹಿಳೆ 24 ವಾರಗಳ ಗರ್ಭಿಣಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com