

ಬೀಜಿಂಗ್: 9 ವರ್ಷಗಳ ಬಳಿಕ ಚೀನಾ ಅಧ್ಯಕ್ಷರೊಬ್ಬರು ಪಾಕಿಸ್ತಾನಕ್ಕೆ ಭೇಟಿಕೊಟ್ಟಿದ್ದಾರೆ. ದಶಕಗಳ ಆತ್ಮೀಯ ಸಂಬಂಧದ ಹೊರತಾಗಿಯೂ ಮೂಲಸೌಲಭ್ಯ, ಇಂಧನ ಕ್ಷೇತ್ರದಲ್ಲಿ ಅಮೆರಿಕ ನೀಡದಷ್ಟು ನೆರವನ್ನು ಪಾಕ್ ಗೆ ಕೊಡಲು ಮುಂದೆ ಬಂದಿದ್ದಾರೆ. ಈ ಮೂಲಕ ಹಳೆಯ ಮಿತ್ರನ ಮೇಲಿರುವ ಅಮೆರಿಕದ ಪ್ರಭವ ತಗ್ಗಿಸಲು ಮುಂದಾಗಿದ್ದಾರೆ. ಈ ಭೇಟಿಯಿಂದ ಭಾರತ ಆತಂಕಪಡಲು ಕಾರಣಗಳೂ ಇವೆ.
1. ಕ್ಸಿಜಿನ್ ಪಿಂಗ್ ಕೇವಲ ವಾಣಿಜ್ಯ ಉದ್ದೇಶದಿಂದಷ್ಟೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿಲ್ಲ. ಪಾಕ್ ಗೆ ಭಾರಿ ಮಿಲಿಟರಿ ಸಹಕಾರ ನೀಡುವ ಒಪ್ಪಂದಕ್ಕೂ ಸಹಿ ಹಾಕಲಿದ್ದಾರೆ. ಅವುಗಳಲ್ಲಿ ಮುಖ್ಯವಾದದ್ದು ಜಲಾಂತರ್ಗಾಮಿ ಮಾರಾಟ. ಚೀನಾವು ಪಾಕ್ ಗೆ ಒಟ್ಟು 8 ಡೀಸೆಲ್ ಎಲೆಕ್ಟ್ರಿಕ್ ಜಲಾಂತರ್ಗಾಮಿಗಳನ್ನು ನೀಡಲು ಮುಂದೆ ಬಂದಿದೆ.
ಭಾರತದ ಬಳಿ ಇರುವ ಜಲಾಂತರ್ಗಾಮಿಗಳಿಗೆ ಹೋಲಿಸಿದರೆ ಇವುಗಳು ಹೆಚ್ಚು ಅತ್ಯಾಧುನಿಕವಾಗಿವೆ. ಸದ್ಯ ಪಾಕ್ ಬಳಿ 5 ಜಲಾಂತರ್ಗಾಮಿಗಳಿವೆ. ಹೊಸ ಒಪ್ಪಂದದಿಂದ ಪಾಕ್ ನ ಜಲಂತರ್ಗಾಮಿ ಬಲ 13ಕ್ಕೇರಲಿದೆ. ಈ ಮೂಲಕ ಅರಬ್ಬೀ ಸಮುದ್ರದಲ್ಲಿ ಭಾರತದ ನೌಕಾಶಕ್ತಿಗೆ ಸರಿಸಮನಾಗಿ ಪಾಕ್ ನ ನೌಕಾಬಲ ವೃದ್ಧಿಸಿದಂತಾಗಲಿದೆ.
2. 2.89 ಲಕ್ಷ ಕೋಟಿ ವೆಚ್ಚದಲ್ಲಿ ಚೀನಾದ ಪಶ್ಚಿಮ ಭಾಗವನ್ನು ಪಾಕಿಸ್ತಾನದ ಗ್ವದಾರ್ ಬಂದರಿನೊಂದಿಗೆ ಸಂಪರ್ಕಿಸುವ ಆರ್ಥಿಕ ಕಾರಿಡಾರ್ ಭಾರತಕ್ಕೆ ತಲೆ ನೋವಿನ ವಿಚಾರ, ಈ ಕಾರಿಡಾರ್ ಹಾಗೂ ಹೋಗುವುದು ಪಿಒಕೆ ಮೂಲಕ. ಭಾರತದ ಆಕ್ಷೇಪವಿದ್ದರೂ ಚೀನಾ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.
3. ಗ್ವದಾರ್ ಬಂದರಿನಲ್ಲಿ ಮುಂದೆ ಚೀನಾದ ಜಲಾಂತರ್ಗಾಮಿ ಲಂಗರು ಹಾಕಲೂ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ. ಈ ಮೂಲಕ ಹಿಂದೂ ಮಹಾಸಾಗರದಲ್ಲೂ ಭಾರತವನ್ನು ಸುತ್ತುವರಿಯಲು ಚೀನಾಗೆ ಅವಕಾಶ ಸಿಕ್ಕಂತಾಗಿದೆ. ಇದೇ ಕಾರಣಕ್ಕೆ ಚೀನಾವು ಪಾಕ್ ಗೆ ಮಾರಾಟ ಮಾಡುವ ಜಲಾಂತರ್ಗಾಮಿಗಳಿಗೆ ಈ ಬಂದರಿನಲ್ಲೇ ಇಂಧನ ಮರುಪೂರಣ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದು ಆಫ್ಘನ್ ನಲ್ಲಿ ತಾಲಿಬಾನ್ ಉಗ್ರರ ಜತೆಗಿನ ಕಾದಾಟದ ವೇಳೆ ನೆರವು ನೀಡದಕ್ಕಾಗಿ ಅಮೆರಿಕವು ಪಾಕ್ ಗೆ ಕೋಟ್ಯಂತರ ರುಪಾಯಿ ಹಣಕಾಸು ನೆರವು ನೀಡುತ್ತಲೇ ಬಂದಿದೆ.
4.ಈ ಮೂಲಕ ಅದು ಪಾಕ್ ನ ಮೇಲೆ ಪರೋಕ್ಷ ನಿಯಂತ್ರಣ ಸಾಧಿಸುವಲ್ಲೂ ಯಶಸ್ವಿಯಾಗಿತ್ತು. ಆದರೆ, ಈಗ ಚೀನಾವು ಅಮೆರಿಕಗಿಂತಲೂ ದೊಡ್ಡಮೊತ್ತದ ನೆರವು ನೀಡುತ್ತಿದೆ. ಮುಖ್ಯವಾಗಿ ಮೂಲಸೌಲಭ್ಯ ಹಾಗೂ ಇಂಧನ ಕ್ಷೇತ್ರದಲ್ಲಿ ಚೀನಾ ಕಂಪನಿಗಳು ಪಾಕ್ ನಲ್ಲಿ ಬಹುಕೋಟಿ ಹೂಡಿಕೆ ಮಾಡಲಿವೆ. ಇದರಿಂದ ಸಹಜವಾಗಿಯೇ ಪಾಕ್ ನಲ್ಲಿ ಅಮೆರಿಕದ ಪ್ರಭಾವ ಕಡಿಮೆಯಾಗಲಿದೆ. ಹೀಗಾಗಿ ಅಮೆರಿಕ ಮತ್ತೆ ಭಾರತಕ್ಕೆ ಸಂಬಂಧಿಸಿದ ತನ್ನ ನೀತಿಯನ್ನು ಮರುಪರಿಶೀಲಿಸುವ ಆತಂಕ ಶುರುವಾಗಿದೆ.
ಚೀನಾ-ಪಾಕ್ ನಡುವೆ ರಂಡಿ
ಪಾಕ್-ಚೀನಾ ನಡುವೆ 51 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 2 ರಾಷ್ಟ್ರಗಳ ನಡುವೆ ರಿಸರ್ಚ್ ಆ್ಯಂಡ್ ಡೆವಲಪ್ ಮೆಂಟ್ ಇಂಟರ್ ನ್ಯಾಷನಲ್ (ರಂಡಿ-RANDI) ಅನ್ನು ಆರಂಭಿಸಲಾಗಿದೆ. ಇದು 2 ರಾಷ್ಟ್ಗಗಳ ನಡುವೆ ಸಹಿ ಹಾಕಲಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಯೋಜನೆಗೆ ಸಂಬಂಧಿಸಿ ದಾಖಲೆ, ವಿಶೇಷ ತಜ್ಞರ ವಿನಿಮಯ ಸೇರಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಒಟ್ಟು 51 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಮುಸ್ಲಿಂ ಉಗ್ರರ ದಮನ ತಂತ್ರ
ಚೀನಾದ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಮುಸ್ಲಿಂ ಉಗ್ರರ ಉಪಟಳ ಹೆಚ್ಚಾಗುತ್ತಿರುವುದು ಜಿನ್ ಪಿಂಗ್ ಸರ್ಕಾರಕ್ಕೆ ತಲೆನೋವಾಗಿದೆ. ಕ್ಸಿನ್ ಜಿಯಾಂಗ್ ಪ್ರದೇಶ ಪಾಕ್ ಮತ್ತು ಆಫ್ಘನ್ ಗೆ ಹೊಂದಿಕೊಂಡಿರುವುದರಿಂದ ಇಲ್ಲಿನ ಉಗ್ರರಿಗೆ ತಾಲಿಬಾನ್ ನ ಬೆಂಬಲವೂ ಸಿಗುತ್ತಿದೆ. ಹೀಗಾಗಿ ಅಮೆರಿಕ ಹಣಕಾಸು ನೆರವು ನೀಡಿ ಹೇಗೆ ತಾಲಿಬಾನ್ ಉಗ್ರರು ಪಾಕ್ ನಲ್ಲಿ ನೆಲೆ ನಿಲ್ಲದಂತೆ ನೋಡಿಕೊಂಡಿತ್ತೋ ಅದೇ ರೀತಿಯ ತಂತ್ರವನ್ನು ಈಗ ಚೀನಾ ಮಾಡಲು ಹೊರಟಿದೆ. ಹಣಕಾಸು ನೆರವು ಕೊಟ್ಟು ವಝರಿಸ್ತಾನದಲ್ಲಿ ಉಗ್ರ ಧಮನಕ್ಕೆ ಒತ್ತಡ ಹಾಕುತ್ತಿದೆ.