ಚಂಡಮಾರುತಕ್ಕೆ ನಲುಗಿದ ಬಿಹಾರ: 32 ಮಂದಿ ಸಾವು
ಪಾಟ್ನಾ: ಬಿಹಾರದಲ್ಲಿ ಕಳೆದ ರಾತ್ರಿ ಭೀಕರ ಚಂಡಮಾರುತ ಅಪ್ಪಳಿಸಿದ ಪರಿಣಾಮ 32 ಮಂದಿ ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭೀಕರ ಚಂಡಮಾರುತಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಮರಗಳು ಧರೆಗುರುಳಿದ್ದು, ಸಾವಿರಾರು ಗುಡಿಸಲುಗಳು ನೆಲಸಮವಾಗಿದೆ. ಅಲ್ಲದೆ ಕಟಾವಿಗೆ ಬಂದಿದ್ದ ಲಕ್ಷಾಂತರ ಹೆಕ್ಟೇರ್ ಬೆಳೆಗಳು ನಾಶವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ಸುಮಾರು 25 ಮಂದಿ ಸಾವನ್ನಪ್ಪಿದ್ದು, ಮಾಧೇಪುರ್ ದಲ್ಲಿ ಆರು ಹಾಗೂ ಮಧುಬನಿಯಲ್ಲಿ ಒಬ್ಬರು ಸಾವನ್ನಪ್ಪಿರುವುದಾಗಿ ಬಿಹಾರ ಆಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿ ವ್ಯಾಸ್ ಜಿ ತಿಳಿಸಿದ್ದಾರೆ.
ಚಂಡಮಾರುತ ಪೂರ್ನಿಯಾ, ಮಾಧೇಪುರ್, ಸಹಸ್ರಾ, ಮಧುಬನಿ, ಸಂಸ್ತಿಪುರ್, ದರ್ಬಾಂಗ್ ಹಾಗೂ ಕೆಲವೆಡೆ ಹಾನಿ ಮಾಡಿದ್ದು, ಸಾವಿರಾರು ಮರಗಳು ಧರೆಗುಳಿ ಬಿದ್ದಿದ್ದರಿಂದ ವಿದ್ಯುತ್ ಕಂಬ ತುಂಡಾಗಿ ಬಿದ್ದಿವೆ. ಸಾವಿರಾರು ಗುಡಿಸಲು, ಸಾವಿರಾರು ಎಕರೆ ಬೆಳೆ ನಾಶವಾಗಿ ಹೋಗಿರುವುದಾಗಿ ಅಧಿಕಾರಿ ವಿವರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ