ಈ ಬಾರಿ ದುರ್ಬಲ ಮುಂಗಾರು: ಹವಾಮಾನ ಇಲಾಖೆ ಮಾಹಿತಿ

ಈ ವರ್ಷವೂ ಮುಂಗಾರು ಮಾಮೂಲಿಗಿಂತ ದುರ್ಬಲವಾಗಿರುತ್ತದೆಂದು ತಿಳಿಸುವ ಮೂಲಕ ದೇಶದ ವಾಯುವ್ಯ ಮತ್ತು ಮಧ್ಯ ಭಾಗಗಳು...
ಮಾನ್ಸೂನ್ ಮಳೆ
ಮಾನ್ಸೂನ್ ಮಳೆ

ನವದೆಹಲಿ: ಈ ವರ್ಷವೂ ಮುಂಗಾರು ಮಾಮೂಲಿಗಿಂತ ದುರ್ಬಲವಾಗಿರುತ್ತದೆಂದು ತಿಳಿಸುವ ಮೂಲಕ ದೇಶದ ವಾಯುವ್ಯ ಮತ್ತು ಮಧ್ಯ ಭಾಗಗಳು ತೀವ್ರ ಮಳೆಯ ಬರ ಎದುರಿಸಲಿದೆ ಎಂದು ಹವಾಮಾನ ಮುನ್ಸೂಚನಾ ಇಲಾಖೆ ತಿಳಿಸಿದೆ.

ದೀರ್ಘಾವಧಿ ಸರಾಸರಿಯ ಲೆಕ್ಕಾಚಾರದ ಪ್ರಕಾರ ಶೇ93ರಷ್ಟು ಮಳೆಯ ನಿರೀಕ್ಷೆಯಿದ್ದು, ಇದು ಕಳೆದ ಬಾರಿಗೆ ಹೋಲಿಸಿದರೆ ಶೇ5ರಷ್ಟು ಕಡಿಮೆ. ಆದರೆ ಎಲ್ ನಿನೋ ಮಾದರಿಯ ಬರ ಪರಿಸ್ಥಿತಿ ಎದುರಾಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ದೊರೆತಿಲ್ಲ. ಮಳೆ ಕೊರತೆಯಿಂದಾಗಿ ಭತ್ತ, ಕಬ್ಬು, ಸೋಯಾಬೀನ್ ಹಾಗೂ ಹತ್ತಿ ಬೆಳೆಗೆ ಆಪತ್ತು ತಟ್ಟುವ ಸಾಧ್ಯತೆ ಇದೆ. ಕಳೆದ ವರ್ಷ ದೇಶಾದ್ಯಂತ ಶೇ.88ರಷ್ಟು ಮಳೆಯಾಗಿತ್ತು. ಇತ್ತೀಚೆಗಷ್ಟೇ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ರೋ ಮಳೆಗಾಲ ಸಾಮಾನ್ಯವಾಗಿರಲಿದೆ ಎಂದು ವರದಿ ನೀಡಿತ್ತು.

ಹವಾಮಾನ ಮುನ್ಸೂಚನೆಯ ಅಗತ್ಯ ಏನು?
ಪ್ರತಿ ವರ್ಷ ಮುಂಗಾರಿನ ಆರಂಭಕ್ಕೆ ಒಂದು ತಿಂಗಳು ಮುಂಚೆ ಈ ಬಾರಿಯ ಮಳೆಗಾಲ ಹೇಗಿರುತ್ತದೆ ಎಂಬ ಸ್ಥೂಲ ಮುನ್ಸೂಚನೆ ನೀಡುವ ರೂಢಿ ಇದೆ.  ಇದು ನೂರಕ್ಕೆ ನೂರು ಸತ್ಯವಾಗದೆಯೂ ಇರಬಹುದು. ಆದರೆ ಈ ಮುನ್ಸೂಚನೆ, ಕ್ರುಷಿ ಮತ್ತು ಆರ್ಥಿಕ ಯೋಜನೆಗಳಿಗೆ ಸಂಬಂಧಪಟ್ಟಂತೆ ಮುನ್ನೆಚ್ಚರಿಕೆ ವಹಿಸಲು ಸಹಕಾರಿ. ಪ್ರದೇಶವಾರು ಅಥವಾ ತಿಂಗಳ ಸರಾಸರಿ ಮಳೆಯ ಪ್ರಮಾಣವನ್ನು ಈ ಮುನ್ಸೂಚನಾ ವರದಿಯಲ್ಲಿ ನೀಡುವುದಿಲ್ಲ. ಆ ಬಗ್ಗೆ ವರದಿಗಳನ್ನು ಮಳೆಗಾಲದ ಅವಧಿಯ ಪ್ರತಿ ತಿಂಗಳಿನ ಆರಂಭದಲ್ಲಿ ನೀಡಲಾಗುತ್ತದೆ.

-ವರದಿಯನ್ನು ಏಪ್ರಿಲ್ ಗಿಂತ ಮೊದಲೇ ಏಕೆ ನೀಡುವುದಿಲ್ಲ?
ಅಷ್ಟೊಂದು ಮುಂಚಿತವಾಗಿ ನೀಡುವ ವರದಿಯಲ್ಲಿ ನಿಖರತೆ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಎರಡು ತಿಂಗಳು ಮುಂಚಿತವಾಗಿ ನೀಡುವ ವರದಿ ಹೆಚ್ಚು ವಿಶ್ವಾಸಾರ್ಹ.

-ವರದಿ ಹೇಗೆ ಸಿದ್ಧಪಡಿಸಲಾಗುತ್ತದೆ?
ಭೂಮಿ ಹಾಗೂ ಭೂಮಿಯನ್ನು ಆವರಿಸಿರುವ ವಿವಿಧ ಸಮುದ್ರಗಳ ಮೇಲ್ಮೈ ತಾಪಮಾನ ಆಧರಿಸಿ ಈ ವರದಿ ಸಿದ್ಧವಾಗುತ್ತದೆ. ಎಲ್ ನಿನೋ ಎಫೆಕ್ಟ್ ಆಧಾರದ ಮೇಲೂ ವಾರ್ಷಿಕ ಮಳೆ ಪ್ರಮಾಣ ನಿರ್ಧಾರವಾಗುತ್ತದೆ.

ಎಲ್ ನಿನೋ ಪ್ರಭಾವ ಇದೆ ಅಂದ್ರೆ ಅದು ಬರಗಾಲದ ಮುನ್ಸೂಚನೆಯಾ?
ಮುಂಗಾರು ದುರ್ಬಲವಾಗುವುದಕ್ಕೆ ಹಲವು ಕಾರಣಗಳಿವೆ. ಎಲ್ ನಿನೋ ಕೂಡ ಒಂದು. ಅಮೆರಿಕಾದ ಒಂದು ಸಂಸ್ಥೆ ಈ ವರ್ಷ ಎಲ್ ನಿನೋ ಸಾಧ್ಯತೆ ಶೇ70ರಷ್ಟಿದೆ ಎಂದು ಹೇಳಿದೆ.
ಎಲ್ ನಿನೋ ಅಂದರೆ ಬರಗಾಲ ಎಂದು ಹೆದರಬೇಕಿಲ್ಲ. ಮುಂಗಾರು ನಿರೀಕ್ಷೆಗಿಂತ ದುರ್ಬಲ ಅಂತಷ್ಟೇ ಅರ್ಥ. ಎಲ್ ನಿನೋ ಮುನ್ಸೂಚನೆ ಕೂಡ ಹಲವು ವರ್ಷಗಳಿಂದ ಸುಳ್ಳಾಗಿರುವ ಉದಾಹರಣೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com