
ನವದೆಹಲಿ: ಜಮ್ಮ ಕಾಶ್ಮೀರದ ಉಧಂಪುರ ಜಿಲ್ಲೆಯ ಸಮ್ರೌಲಿ ಪ್ರದೇಶದ ಹೆದ್ದಾರಿಯಲ್ಲಿ ಉಗ್ರರು ನಡೆಸಿದ ದಾಳಿ ವೇಳೆ ಓರ್ವ ಉಗ್ರನನ್ನು ಬಂಧನಕ್ಕೊಳಪಡಿಸಿದ್ದು, ಒತ್ತೆಯಾಳುಗಳೆಲ್ಲರನ್ನು ಬಿಡುಗಡೆ ಮಾಡಲಾಗಿದೆ ಎಂದು ಬುಧವಾರ ಮೂಲಗಳಿಂದ ತಿಳಿದುಬಂದಿದೆ.
ಸಮ್ರೌಲಿ ಪ್ರದೇಶದ ಹೆದ್ದಾರಿಯಲ್ಲಿ ಉಗ್ರರು ತಮ್ಮ ಅಟ್ಟಹಾಸ ಮೆರೆದು ಇಬ್ಬರು ಬಿಎಸ್ಎಫ್ ಯೋಧರನ್ನು ಬಲಿಪಡೆದಿದ್ದರು. ಉಗ್ರರ ಅಟ್ಟಹಾಸಕ್ಕೆ ತಕ್ಕ ಉತ್ತರ ನೀಡುತ್ತಿದ್ದು ಭಾರತೀಯ ಯೋಧರು ಇದೀಗ ಓರ್ವ ಉಗ್ರನನ್ನು ಸಜೀವವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಗ್ರರು ಒತ್ತೆಯಾಳುಗಳಾಗಿರಿಸಿಕೊಂಡಿದ್ದವರನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಮರನಾಧ ಯಾತ್ರಿಕರ ತಂಡ ಸ್ಥಳದಿಂದ ಮುಂದೆ ಸಾಗಿದ ಕೂಡಲೇ ಬಿಎಸ್ಎಫ್ ಬೆಂಗಾವಲು ಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಬಿಎಸ್ಎಫ್ ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಉಗ್ರರ ದಾಳಿ ಖಚಿತವಾಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದು ಓರ್ವ ಉಗ್ರನನ್ನು ಸಜೀವವಾಗಿ ಬಂಧಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಪ್ರಧಾನಮಂತ್ರಿ ಸಚಿವಾಲಯವು, ಉಗ್ರರ ದಾಳಿಯಲ್ಲಿ ಒತ್ತೆಯಾಳುಗಳಾಗಿರಿಸಿಕೊಂಡಿರುವವರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ದಾಳಿ ವೇಳೆ ಓರ್ವ ಉಗ್ರನನ್ನು ಸಜೀವವಾಗಿ ಬಂಧಿಸಲಾಗಿದೆ ಎಂದು ಹೇಳಿದೆ.
ಬಂಧಿತ ಉಗ್ರರನ್ನು ಪಾಕಿಸ್ತಾನದ ಉಸ್ಮನ್ ಖಾನ್ ಎಂದು ಹೇಳಲಾಗುತ್ತಿದ್ದು, ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದವನಾಗಿದ್ದಾನೆ ಎಂದು ತಿಳಿದುಬಂದಿದೆ.
Advertisement