
ಲಖನೌ: ಲಖನೌದಲ್ಲಿರುವ ನೆಸ್ಲೇ ಕಂಪನಿಯ ಮ್ಯಾಗಿ ಗೋದಾಮಿನ ಮೇಲೆ ದಾಳಿ ನಡೆಸಿದ ಉತ್ತರ ಪ್ರದೇಶದ ಆಹಾರ ಮತ್ತು ಔಷಧ ಆಡಳಿತ ಮಂಡಳಿ, 2 ನಿಮಿಷದಲ್ಲಿ ತಯಾರಾಗುವ ಸುಮಾರು 20,000 ಕೆಜಿ ಮ್ಯಾಗಿಯನ್ನು ವಶಪಡಿಸಿಕೊಂಡಿದೆ.
ಈ ಮೊದಲು, ಲಖನೌ ಪ್ರಯೋಗಾಲಯ ಪರೀಕ್ಷೆಯಲ್ಲಿ 'ಮ್ಯಾಗಿ ನೂಡಲ್' ಮಾದರಿ ವಿಫಲಗೊಂಡಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇನ್ಸ್ ಪೆಕ್ಟರ್ ಹೇಳಿದ್ದರು.
'ಮ್ಯಾಗಿ' ಸ್ಯಾಂಪಲ್ಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಇದ್ದುದು ಪತ್ತೆಯಾಗಿದೆ ಎಂದು ತಿಳಿಸಿದ್ದರು.
ಜೂನ್ ತಿಂಗಳಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರಲಾಗಿತ್ತು. ಮ್ಯಾಗಿ ಸೇರಿದಂತೆ ಇತರೆ ಯಾವುದೇ ನೂಡಲ್ಸ್ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಕ್ಲೀನ್ ಚಿಟ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮ್ಯಾಗಿ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ.
ಮ್ಯಾಗಿಯಲ್ಲಿ ಮಾನೋಸೋಡಿಯಂ ಗ್ಲುಟಾಮೇಟ್ (ಎಂಎಸ್ಜಿ) ಮತ್ತು ಸತುವಿನ ಅಂಶ ಮಿತಿಗಿಂತ ಹೆಚ್ಚಿದೆ ಎಂಬ ಪ್ರಾಥಮಿಕ ವರದಿಗಳ ಬಳಿಕ ರಾಜ್ಯಾದ್ಯಂತ 500 ಮಾದರಿಗಳನ್ನು ಸಂಗ್ರಹಿಸಲಾಯಿತು. ಇವುಗಳಲ್ಲಿ ಐದು ಮಾದರಿಗಳು ಸಂಪೂರ್ಣ ‘ಅಯೋಗ್ಯ’ ಎಂದು ಕಂಡು ಬಂದಿದೆ ಎಂದು ಎಫ್ಎಸ್ಎಸ್ಎಐ ಹೇಳಿತ್ತು.
Advertisement