

ಗ್ಯಾಂಗ್‍ಟಕ್: ದೇಶದ ಮೊಟ್ಟಮೊದಲ ಅಧಿಕೃತ ಬೆಟ್ಟಿಂಗ್ ಮಳಿಗೆಗೆ ಸಿಕ್ಕಿಂ ಹಸಿರು ನಿಶಾನೆ ತೋರಿದೆ. ಆದರೆ ಇದು ಕೇವಲ ಆ ರಾಜ್ಯಕ್ಕೆ ಸೀಮಿತಗೊಳಿಸುವ ಮೂಲಕ ಬೆಟ್ಟಿಂಗ್ ಪ್ರಿಯರನ್ನು ನಿರಾಶೆಗೊಳಿಸಿದೆ.
ಬೆಟ್ಟಿಂಗ್ ವ್ಯಾಪ್ತಿ ದೇಶಾದ್ಯಂತ ವಿಸ್ತರಿಸುವುದಿಲ್ಲವೆಂದೂ, ವೆಬ್‍ಸೈಟ್ ಮೂಲಕ ಆನ್ ಲೈನ್ ಜೂಜು ಕೂಡ ರಾಜ್ಯಕ್ಕೆ ಮಾತ್ರ ಸೀಮಿತವೆಂದು ಅಸೆಂಬ್ಲಿ ಘೋಷಿಸುವ ಮೂಲಕ ಸಿಕ್ಕಿಂ ಬೆಟ್ಟಿಂಗ್ ದಂಧೆಯ ಉತ್ಸಾಹಕ್ಕೆ ಸಣ್ಣಗೆ ತಣ್ಣೀರೆರಚಿದೆ. ಆದರೂ 2015ರ ಸಿಕ್ಕಿಂ ಆನ್‍ಲೈನ್ ಗೇಮಿಂಗ್(ನಿಯಂತ್ರಣ) ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿರುವುದು ಸಿಕ್ಕಿಂನ ಬೆಟ್ಟಿಂಗ್ ವ್ಯವಹಾರಸ್ಥರ ಉತ್ಸಾಹವನ್ನು ಗರಿಗೆದರಿಸಿದೆ.
ಗೋಲ್ಡನ್ ಗೇಮಿಂಗ್ ಇಂಟರ್‍ನ್ಯಾಷನಲ್ನ ನಿರ್ದೇಶಕ ಮನೋಜ್ ಸೇಠಿ ಈಗಾಗಲೇ ಗ್ಯಾಂಗ್ ಟಕ್‍ನಾದ್ಯಂತ ಹೋರ್ಡಿಂಗ್ ಮತ್ತು ಬ್ಯಾನರ್‍ಗಳನ್ನು ಹಾಕಿ ಜಾಹೀರಾತು ಪ್ರಾರಂಭಿಸಿದ್ದಾರೆ. ಸೆಪ್ಟೆಂಬರ್ ನಿಂದ ಅಧಿಕೃತ ಜೂಜು ಶುರುವಾಗಲಿದೆ ಎಂದೂ ಘೋಷಿಸಿದ್ದಾರೆ. ದೇಶದಲ್ಲಿ ಗೇಮಿಂಗ್ ಕಾನೂನುಗಳು ಹೆಚ್ಚು ಸಡಿಲವಾಗಿರುವುದು ಸಿಕ್ಕಿಂನಲ್ಲಿಯೇ.
ದೇಶದ ಮೊದಲ ಆನ್‍ಲೈನ್ ಲಾಟರಿ, ಪ್ಲೇವಿನ್ ಶುರುವಾದದ್ದು ಕೂಡ ಇಲ್ಲಿಯೀ. ಈವರೆಗೂ ಸರ್ಕಾರದ ಸಮ್ಮತಿಯ ಮೇರೆಗೇ ಪಂಚತಾರಾ ಹೋಟೆಲ್ಗಳಲ್ಲಿ ಕ್ಯಾಸಿನೋ ಆಟ, ಲಾಟರಿ ಹಾಗೂ ಆನ್‍ಲೈನ್ ಬೆಟ್ಟಿಂಗ್ ಮತ್ತು ಆಟಗಳು ನಡೆಯುತಿದ್ದವು. ಸೆಪ್ಟೆಂಬರ್ ನಿಂದ ಸಂಪೂರ್ಣ ನಿರ್ಭಯವಾಗಿ ಅವುಗಳಿಗೆ ಚಾಲನೆ ಸಿಗಲಿದೆ.