
ನವದೆಹಲಿ: 'ಸಮಾನ ಶ್ರೇಣಿ, ಸಮಾನ ಪಿಂಚಣಿ' ಯೋಜನೆಗೆ ಸಂಬಂಧಪಟ್ಟಂತೆ ಮಾಜಿ ಸೇನಾ ಯೋಧರು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಲಕ್ಷಣ ಕಾಣುತ್ತಿದೆ.
ಸೋಮವಾರ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತ ಇಬ್ಬರು ಮಾಜಿ ಸೇನಾಧಿಕಾರಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕರ್ನಲ್ ರಾದ ಪುಷ್ಪೇಂದರ್ ಸಿಂಗ್ ಮತ್ತು ಹವಿಲ್ತಾರ್ ಸಿಂಗ್ ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಮಾಜಿ ಸೇನಾಧಿಕಾರಿಗಳ ಸಂಯುಕ್ತ ಬಣದ ಮಾಧ್ಯಮ ಸಲಹೆಗಾರ ಕರ್ನಲ್ ಅನಿಲ್ ಕೌಲ್ ತಿಳಿಸಿದ್ದಾರೆ.
ಮಾಜಿ ಯೋಧರು ಮತ್ತು ಮಾಜಿ ಸೇನಾಧಿಕಾರಿಗಳು ಜಂತರ್ ಮಂತರ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಇಂದು 64ನೇ ದಿನಕ್ಕೆ ಕಾಲಿಟ್ಟಿದೆ. ಇದರ ಜೊತೆ, ಇಂದು ಪ್ರಧಾನಿಗೆ 10 ಮಂದಿ ಬಹಿರಂಗ ಪತ್ರ ಬರೆದಿದ್ದು, ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಬಂದು ತೊಂದರೆಯನ್ನುಂಟುಮಾಡಿದ್ದು ಬೇಸರ ತಂದಿದೆ. ಪೊಲೀಸರ ಈ ಕ್ರಮದ ಬಗ್ಗೆ ಸರ್ಕಾರ ತನಿಖೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮೊನ್ನೆ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ, ಸಮಾನ ಶ್ರೇಣಿ, ಸಮಾನ ಪಿಂಚಣಿ' ಯೋಜನೆಯನ್ನು ಜಾರಿಗೆ ತರಲು ನಿರ್ದಿಷ್ಟ ಗಡುವು ನೀಡಿರಲಿಲ್ಲ. ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮಾತ್ರ ಹೇಳಿದ್ದರು. ಈ ಬಗ್ಗೆ ಅಸಮಾಧಾನಗೊಂಡಿರುವ ಮಾಜಿ ಸೇನಾಧಿಕಾರಿಗಳು ಯೋಜನೆಯನ್ನು ವಿಳಂಬ ಮಾಡದೆ ಶೀಘ್ರವೇ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಸಮಾನ ಶ್ರೇಣಿ, ಸಮಾನ ಪಿಂಚಣಿ' ಯೋಜನೆ ಜಾರಿಗೆ ಬಂದರೆ ದೇಶದಲ್ಲಿ ಸುಮಾರು 22 ಲಕ್ಷ ಮಂದಿ ಮಾಜಿ ಸೇನಾಧಿಕಾರಿಗಳು ಮತ್ತು ಸುಮಾರು 6 ಲಕ್ಷ ಮಂದಿ ವಿಧವೆಯರು ತಕ್ಷಣದಿಂದಲೇ ಫಲಾನುಭವಿಗಳಾಗಿದ್ದಾರೆ. ಸಮಾನ ಶ್ರೇಣಿ ಮತ್ತು ಸಮಾನ ಅವಧಿಯವರೆಗೆ ಸೇವೆ ಸಲ್ಲಿಸಿ ನಿವೃತ್ತರಾದವರು ಅವರ ನಿವೃತ್ತಿ ದಿನಾಂಕ ಬೇರೆಯಾದರೂ ಸಹ ಸಮಾನ ಪಿಂಚಣಿ ನೀಡಬೇಕೆಂಬುದು ಮಾಜಿ ಯೋಧರ ಬೇಡಿಕೆಯಾಗಿದೆ.
ಪ್ರಸ್ತುತ ಮಾಜಿ ಯೋಧರು, ವೇತನ ಆಯೋಗದ ಶಿಫಾರಸ್ಸಿನಂತೆ ಅವರು ನಿವೃತ್ತಿ ಹೊಂದುವ ಸಮಯಕ್ಕೆ ನಿವೃತ್ತಿ ವೇತನ ಪಡೆಯುತ್ತಾರೆ. ಇದರಿಂದ ವೇತನ ತಾರತಮ್ಯವಾಗುತ್ತದೆ ಎಂಬುದು ಮಾಜಿ ಯೋಧರ ಬೇಡಿಕೆಗೆ ಕಾರಣವಾಗಿದೆ.
ನಿನ್ನೆ ಮಾಜಿ ಸೇನಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಯೋಜನೆ ಜಾರಿಗೆ ಅಂತಿಮ ನಿರ್ಧಾರವನ್ನು ಇನ್ನು ನಾಲ್ಕೈದು ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
Advertisement