
ನವದೆಹಲಿ: 59 ಮಂದಿಯ ದಾರುಣ ಸಾವಿಗೆ ಕಾರಣವಾಗಿದ್ದ "ಉಪಹಾರ್" ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಆರೋಪಿಗಳಾದ ಅನ್ಸಾಲ್ ಸಹೋದರರಿಗೆ 60 ಕೋಟಿ ರುಪಾಯಿ ದಂಡ ವಿಧಿಸಿದೆ.
ಸುಮಾರು ಹದಿನೈದು ವರ್ಷಗಳ ಹಿಂದೆ ದಕ್ಷಿಣ ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಅನ್ಸಾಲ್ ಸಹೋದರರ ನಿರ್ಲಕ್ಷ್ಯತೆ ಕಾಣುತ್ತಿದೆಯಾದರೂ ಅವರು ಜೈಲಿಗೆ ಹೋಗುವ ಅವಶ್ಯಕತೆ ಇಲ್ಲ. 60 ಕೋಟಿ ದಂಡ ಪಾವತಿ ಮಾಡಬೇಕು ಎಂದು ಹೇಳಿದೆ. ಆ ಮೂಲಕ ಅನ್ಸಾಲ್ ಸಹೋದರರಿಗೆ ಭಾರಿ ದಂಡವನ್ನೇ ವಿಧಿಸಿದೆ. ಅಲ್ಲದೆ ಈ ದಂಡವನ್ನು ಇನ್ನು 3 ತಿಂಗಳೊಳಗೆ ಪಾವತಿಸುವಂತೆ ಆದೇಶ ಹೊರಡಿಸಿದೆ.
ದೇಶ ಕಂಡ ಅತ್ಯಂತ ಭೀಕರ ದುರಂತಗಳಲ್ಲಿ ಉಪಹಾರ್ ದುರಂತ ಕೂಡ ಒಂದು ಎನ್ನಲಾಗುತ್ತದೆ. ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಸಮೀಪವಿರುವ ಉಪಹಾರ್ ಚಿತ್ರಮಂದಿರದಲ್ಲಿ 1997 ಜೂನ್ 13ರಂದು "ಬಾರ್ಡರ್" ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಅಗ್ನಿ ಅಕಸ್ಮಿಕದಿಂದಾಗಿ ಸುಮಾರು 59 ಮಂದಿ ಅಸುನೀಗಿದ್ದರು. ಅಲ್ಲದೆ ಘಟನೆಯಲ್ಲಿ ಉಸಿರುಗಟ್ಟಿ ಮತ್ತು ಕಾಲ್ತುಳಿತದಿಂದಾಗಿ ಸುಮಾರು 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಚಿತ್ರಮಂದಿರದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರದ ಕಾರಣದಿಂದಲೇ ದುರಂತ ಸಂಭವಿಸಿದೆ ಎಂದು ಆರೋಪಿಸಿ ಉಪಹಾರ್ ಚಿತ್ರಮಂದಿರ ಮಾಲೀಕರಾದ ಅನ್ಸಾಲ್ ಸಹೋದರರ ವಿರುದ್ಧ ಗಾಯಾಳುಗಳ ಮತ್ತು ಮೃತರ ಸಂಬಂಧಿಕರು ದಾವೆ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಮೃತರ ಮತ್ತು ಗಾಯಾಳುಗಳ ಸಂಬಂಧಿಕರಿಗೆ 25 ಕೋಟಿ ರು. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ದೆಹಲಿ ನ್ಯಾಯಾಲಯ ಹೇರಿದ ದಂಡದ ಮೊತ್ತ ಹೆಚ್ಚಾಯಿತು ಎಂದು ಅನ್ಸಾಲ್ ಸಹೋದರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
Advertisement