
ನವದೆಹಲಿ: ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿ ನಾಯಕರನ್ನು ಗೃಹ ಬಂಧನದಲ್ಲಿರಿಸಿ ಎರಡು ಗಂಟೆಗಳ ನಂತರ ಬಿಡುಗಡೆ ಮಾಡಿರುವ ಕೇಂದ್ರ ಹಾಗೂ ಜಮ್ಮು ಕಾಶ್ಮೀರ ಸರ್ಕಾರದ ಕ್ರಮ ವಿಲಕ್ಷಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಕೇಂದ್ರ ಸರ್ಕಾರದ ಆದೇಶದ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಕ್ರಮಕ್ಕೆ ನಾಚಿಕೆಪಟ್ಟುಕೊಳ್ಳಬೇಕು. ಹುರ್ರಿಯತ್ ನಾಯಕರನ್ನು ಬಂಧಿಸುವ ಅಗತ್ಯವೇನಿತ್ತು ಎಂದು ಅವರು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಹುರಿಯತ್ ಕಾನ್ಫೆರೆನ್ಸ್ ನಾಯಕ ಸಯೀದ್ ಅಲಿ ಶಾಹ್ ಗೀಲಾನಿ, ಹುರಿಯತ್ ಗ್ರೂಪ್ ಅಧ್ಯಕ್ಷ ಮಿರ್ವಾಝ್ ಉಮರ್ ಫಾರೂಖ್ ಹಾಗೂ ಹುರಿಯತ್‌ನ ಅಬ್ಬಾಸ್ ಅನ್ಸಾರಿಗೆ ಗೃಹ ಬಂಧನದಲ್ಲಿರಿಸಿ ಬಿಡುಗಡೆ ಮಾಡಲಾಗಿತ್ತು.
ಜಮ್ಮು-ಕಾಶ್ಮೀರ ಸರ್ಕಾರ ಈ ಹಿಂದೆ ಯಾವತ್ತೂ ಪಾಕಿಸ್ತಾನ ಉನ್ನತ ಆಯೋಗವನ್ನು ಭೇಟಿ ಮಾಡದಂತೆ ಹುರ್ರಿಯತ್ ನಾಯಕರನ್ನು ಬಂಧಿಸಿ ತಡೆದಿರಲಿಲ್ಲ. ಹುರ್ರಿಯತ್ ನಾಯಕರು ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡಬಾರದು ಎಂದು ಸರ್ಕಾರಕ್ಕೆ ಇದ್ದಿದ್ದರೆ ಅವರಷ್ಟಕ್ಕೇ ಸೆರೆಮನೆಯಲ್ಲಿರುವಂತೆ ಹೇಳಬಹುದಾಗಿತ್ತು ಎಂದು ಒಮರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಪಾಕ್ ನಡುವಣ ಮಾತುಕತೆಯನ್ನು ನಾಶಪಡಿಸಲು ಎರಡೂ ದೇಶಗಳು ಇಷ್ಟೊಂದು ಆಸಕ್ತಿ ಹೊಂದಿರುವುದನ್ನು ತಾವು ಈ ಹಿಂದೆ ಯಾವತ್ತೂ ನೋಡಿರಲಿಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಯನ್ನು ರದ್ದುಪಡಿಸಲು ಎರಡೂ ದೇಶಗಳು ತೀವ್ರ ಪ್ರಯತ್ನಪಡುತ್ತಿವೆ ಎಂದು ಒಮರ್ ಅಬ್ದುಲ್ಲಾ ಹೇಳಿದರು.
Advertisement