
ನವದೆಹಲಿ: ಉಭಯ ರಾಷ್ಟ್ರಗಳ ಭದ್ರತಾ ಸಲಹೆಗಾರರ (ಎನ್ಎಸ್ಎ) ಮಟ್ಟದ ಸಭೆ ಸಂಬಂಧ ಭಾರತ-ಪಾಕಿಸ್ತಾನ ನಡುವೆ ಇತ್ತ ವಾಕ್ಸಮರ ನಡೆಯುತ್ತಿದ್ದರೆ, ಅತ್ತ ಭಾರತದ ನಿಲುವನ್ನು ಕಡೆಗಣಿಸಿ ಸರ್ತಾಜ್ ಅಜೀಜ್ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಶಾ ಅವರನ್ನು ಅಧಿಕಾರಿಗಳು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಎನ್ಎಸ್ಎ ಸಂಬಂಧ ಸಾಕಷ್ಟು ಗೊಂದಲಗಳಿವೆ. ಆದರೂ, ನಾನು ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಗೆ ತೆರಳುತ್ತಿದ್ದಂತೆ ಪಾಕಿಸ್ತಾನದ ಪ್ರಧಾನಿ ಅವರ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ನೀತಿ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡುತ್ತೇನೆಂದು ಹೇಳಿದ್ದ ಶಬೀರ್ ಅಹ್ಮದ್ ಶಾ ಇಂದು ಬೆಳಿಗ್ಗೆ ದೆಹಲಿಗೆ ತೆರಳಿದ್ದರು.
ಶಬೀರ್ ಅಹ್ಮದ್ ಶಾ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆಯೇ ಅವರನ್ನು ತಡೆಹಿಡಿದ ಅಧಿಕಾರಿಗಳು ಶಬೀರ್ ಅವರನ್ನು ಬಂಧನಕ್ಕೊಳಪಡಿಸಿದ್ದು, ಬಹಿರಂಗ ಪಡಿಸದ ಸ್ಥಳವೊಂದರಲ್ಲಿ ಇರಿಸಿದ್ದಾರೆಂದು ತಿಳಿದುಬಂದಿದೆ.
ಆಗಸ್ಚ್ 23-24ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಸಭೆಗೂ ಮುನ್ನ ಕಾಶ್ಮೀರದ ಪ್ರತ್ಯೇಕತಾವಾದಿಗಳ ಜತೆ ಮಾತನಾಡಲು ಪಾಕಿಸ್ತಾನ ಇದೀಗ ಮುಂದಾಗಿದ್ದು, ಇದನ್ನು ಶತಯಾಗತಾಯವಾಗಿ ಭಾರತ ವಿರೋಧಿಸಿದೆ. ಇತ್ತೀಚೆಗಷ್ಟೇ ರಷ್ಯಾದ ಯುಫಾದಲ್ಲಿ ನಡೆದ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಷ್ ಅವರು ಚರ್ಚಿಸಿದಂತೆ ಭಯೋತ್ಪಾದನೆಯ ಸಭೆಯ ಪ್ರಮುಖ ವಿಷಯವಾಗಬೇಕು. ಯಾವುದೇ ಕಾರಣಕ್ಕೂ ಪಾಕ್ ನ ಎನ್ ಎಸ್ ಎ ಹುರಿಯತ್ ನಾಯಕರ ಜತೆ ಮಾತುಕತೆ ನಡೆಸಬಾರದೆಂದು ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ನೀಡಿತ್ತು.
ಇದರ ಹಿನ್ನೆಲೆಯಲ್ಲಿ ಷರೀಷ್ ನೇತೃತ್ವದಲ್ಲಿ ಶುಕ್ರವಾರ ಉನ್ನತ ಅಧಿಕಾರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ಭಾರತದ ಷರತ್ತುಗಳನ್ನು ತಿರಸ್ಕರಿಸಲು ಪಾಕಿಸ್ತಾನ ನಿರ್ಣಯ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದಾಗ ಪ್ರತ್ಯೇಕತಾವಾದಿಗಳ ಜೊತೆ ಮಾತನಾಡುವುದು ಸಂಪ್ರದಾಯವಾಗಿದ್ದು, ಭಾರತ ಉಪದೇಶಕ್ಕೆ ಮಣಿದು ಇದನ್ನು ಮುರಿಯಲು ಸಾಧ್ಯವಿಲ್ಲ. ಒಂದು ವೇಳೆ ಹುರಿಯತ್ ನಾಯಕರ ಜತೆ ಭೇಟಿ ಬೇಡ ಎಂದು ಭಾರತ ತನ್ನ ಪಟ್ಟನ್ನು ಮುಂದುವರಿಸಿದರೆ, ಎನ್ಎಸ್ಎ ಸಭೆಯನ್ನೇ ರದ್ದು ಮಾಡುವುದಾಕಿ ಪಾಕ್ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
Advertisement