ನವದೆಹಲಿ: ಅನ್ಯ ದೇಶದ ಸೈನಿಕರಿಂದ ಸದಾ ಕಾಲ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ದೇಶದ ರಕ್ಷಣೆಯ ಜೊತೆ-ಜೊತೆಗೆ ಪ್ರಕೃತಿ ಪ್ರೇಮವನ್ನು ಕೂಡ ತೋರಿದ್ದಾರೆ.
ಭಾರತದ ಗಡಿ ಪ್ರದೇಶದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಏಕಕಾಲದಲ್ಲಿ ಸುಮಾರು 1 ಲಕ್ಷ 35 ಸಾವಿರ ಸಸಿಗಳನ್ನು ನೆಡುವ ಮೂಲಕ ಬಿಎಸ್ ಎಫ್ ಯೋಧರು ತಮ್ಮ ಪ್ರಕೃತಿ ಪ್ರೇಮ ಮೆರೆದಿದ್ದಾರೆ. ಜೋಧ್ಪುರದಿಂದ ಹಿಡಿದು ಜೈಸ್ಲೇಮರ್ ವರೆಗಿನ ಸುಮಾರು 231 ಪೋಸ್ಟ್ ಗಳಲ್ಲಿ ಯೋಧರು ಸಸಿಗಳನ್ನು ನೆಟ್ಟಿದ್ದಾರೆ. ಬಿಎಸ್ ಎಫ್ ನ ಸುಮಾರು 14 ಬೆಟಾಲಿಯನ್ ಯೋಧರು ರಾಜಸ್ತಾನದ ಜೋಧ್ ಪುರದ ಹೆಡ್ ಕ್ವಾರ್ಟರ್ಸ್, ಸೈನಿಕ ತರಬೇತಿ ಕ್ಯಾಂಪ್, ಗಂಗಾನಗರದಲ್ಲಿ ಯೋಧರ ಹೆಡ್ ಕ್ವಾರ್ಟರ್ಸ್, ಬಿಕಾನೇರ್ ಕ್ಯಾಂಪ್ ಮತ್ತು ದಕ್ಷಿಣ ಮತ್ತು ಉತ್ತರ ಜೈಸ್ಲೇಮರ್ ಕ್ಯಾಂಪ್ ಗಳಲ್ಲಿ ಏಕಕಾಲದಲ್ಲಿ ಸುಮಾರು 1 ಲಕ್ಷ 35 ಸಾವಿರ ಸಸಿಗಳನ್ನು ಕೇವಲ ಅರ್ಧ ಗಂಟೆಯಲ್ಲಿ ನೆಟ್ಟಿದ್ದಾರೆ.
ಯೋಧರು ನೆಟ್ಟಿರುವ ಸಸಿಗಳ ಪೈಕಿ ಆರೋಗ್ಯಕರ ಮದ್ದುಗಳನ್ನು ಹೊಂದಿರುವ ಮತ್ತು ಹಣ್ಣುಗಳ ಸಸಿಗಳನ್ನು ನೆಡಲಾಗಿದೆ. ಬೇವು, ಸೀಬೆ, ಹುಣಸೆ, ನೆಲ್ಲಿ ಕಾಯಿಯ ಸಸಿಗಳನ್ನು ಕೂಡ ನೆಡಲಾಗಿದೆ. ಬೆಳಗ್ಗೆ 10 ಗಂಟೆಗೆ ಶುರುವಾದ ಈ ಅಭಿಯಾನ 10.30ಕ್ಕೆ ಕೊನೆಗೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
Advertisement