
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ನಡುವಿನ ಎನ್ಎಸ್ಎ ಮಾತುಕತೆ ರದ್ದುಗೊಂಡಿರುವ ಬಗ್ಗೆ ಆರೋಪ ಪ್ರಾತ್ಯಾರೋಪಗಳು ಕೇಳಿಬರುತ್ತಿವೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್, ಎನ್ಎಸ್ಎ ಮಾತುಕತೆ ರದ್ದುಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಾತುಕತೆ ರದ್ದುಗೊಳ್ಳಲು ಪ್ರತ್ಯೇಕತಾವಾದಿಗಳೇ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.
ಪ್ರತ್ಯೇಕತಾವಾದಿಗಳೂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎನ್ಎಸ್ಎ ಸಭೆ ನಡೆಯದೇ ಇರುವುದಕ್ಕೆ ಭಾರತವೇ ಕಾರಣ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಎನ್ಎಸ್ಎ ಮಾತುಕತೆ ಉಭಯ ದೇಶಗಳ ಭವಿಷ್ಯವನ್ನು ಬದಲಾಯಿಸಲಿದೆ ಎಂದು ನಿರೀಕ್ಷಿಸಿದ್ದೆ. ಆದರೆ ಈ ಸಭೆ ರದ್ದುಗೊಂಡಿರುವುದು ತೀವ್ರ ಅಸಮಾಧಾನ ಮೂಡಿಸಿದ್ದು ಮಾತುಕತೆಯಲ್ಲಿನ ಬಿರುಕು ಕೇವಲ ತಾತ್ಕಾಲಿಕವಷ್ಟೇ ಎಂದು ಮುಫ್ತಿ ಮೊಹಮದ್ ಸಯಿದ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮಾತುಕತೆಗೆ ಸಮಯ ನಿಗದಿಪಡಿಸುವ ವಿಶ್ವಾಸವಿದೆ ಎಂದು ಮುಫ್ತಿ ಮೊಹಮದ್ ಸಯೀದ್ ಹೇಳಿದ್ದಾರೆ. ಇನ್ನು ಫಾರೂಕ್ ಅಬ್ದುಲ್ಲಾ ಕಾಶ್ಮೀರಿ ಪ್ರತ್ಯೇಕತಾವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು ಸ್ವಯಂ ಘೋಷಿತ ಚಾಂಪಿಯನ್ ಗಳಾದ ಪ್ರತ್ಯೇಕತಾವಾದಿಗಳಿಂದಲೇ ಮಾತುಕತೆ ಮುರಿದುಬಿದ್ದಿದೆ ಎಂದು ಆರೋಪಿಸಿದ್ದಾರೆ.
Advertisement