
ನವದೆಹಲಿ: ಷೇರು ಮಾರುಕಟ್ಟೆಯ ಕುಸಿತವನ್ನು ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆ ಕಾರಣವಾಗಿದ್ದು ಆರ್.ಬಿ.ಐ ಈ ಬಗ್ಗೆ ಗಮನ ಹರಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಷೇರು ಮಾರುಕಟ್ಟೆ ಕುಸಿತದಿಂದ ಉಂಟಾಗುತ್ತಿರುವುದು ತಾತ್ಕಾಲಿಕ ಪರಿಣಾಮ, ಶೀಘ್ರವೇ ಷೇರು ಮಾರುಕಟ್ಟೆಯನ್ನು ಸ್ಥಿರಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದರ ಬಗ್ಗೆ ಜೇಟ್ಲಿ ಭರವಸೆ ನೀಡಿದ್ದಾರೆ.
ಕೆಲದಿನಗಳಿಂದ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಪ್ರಕ್ಷುಬ್ಧತೆ ಭಾರತದ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಷೇರು ಮಾರುಕಟ್ಟೆ ಕುಸಿಯುವುದಕ್ಕೆ ಬಾಹ್ಯ ಅಂಶಗಳೇ ಸಂಪೂರ್ಣವಾಗಿ ಕಾರಣವಾಗಿದ್ದು ದೇಶೀಯ ಅಂಶ ಕಾರಣವಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಈ ಪರಿಸ್ಥಿತಿ ತಾತ್ಕಾಲಿಕ, ಷೇರು ಮಾರುಕಟ್ಟೆ ಹಿಂದಿನ ಸ್ಥಿತಿಗೆ ಮರಳಲಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಾಗತಿಕ ಬೆಳವಣಿಗೆಗಳ ಪರಿಣಾಮಗಳನ್ನು ಎದುರಿಸಲು ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಗೊಳಿಸುವುದು ಅಗತ್ಯ ಎಂದು ಜೇಟ್ಲಿ ತಿಳಿಸಿದ್ದಾರೆ. ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ 1,700 ಅಂಕಗಳಷ್ಟು ಭಾರೀ ಕುಸಿತ ಕಂಡಿತ್ತು.
Advertisement