

ನವದೆಹಲಿ: ದೇಶದಲ್ಲಿ ಮರಣದಂಡನೆ ಶಿಕ್ಷೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಸಂಬಂಧ ಮುಂದಿನ ವಾರ ಕಾನೂನು ಆಯೋಗ ವರದಿ ನೀಡಲಿದೆ.
ಮುಂಬೈ ಸರಣಿ ಸ್ಫೋಟ ಆರೋಪಿ ಯಾಕೂಬ್ ಮೆನನ್ ಗಲ್ಲು ಶಿಕ್ಷೆ ಜಾರಿ ವೇಳೆ ದೇಶಾದ್ಯಂತ ಗಲ್ಲುಶಿಕ್ಷೆ ವಿರೋಧಿ ಆಂದೋಲನಗಳು ಎದ್ದ ಈ ಸಂದರ್ಭದಲ್ಲೇ ವರದಿ ಹೊರಬೀಳುತ್ತಿರುವುದು ಕುತೂಹಲ ಮೂಡಿಸಿದೆ. ಮುಂದಿನ ವಾರ ಕಾನೂನು ಆಯೋಗ ಸುಪ್ರೀಂಕೋರ್ಟ್‍ಗೆ ಈ ವರದಿ ಸಲ್ಲಿಸಲಿದ್ದು, ಒಂದು ಪ್ರತಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೂ ನೀಡಲಿದೆ.
ಈ ವರದಿಯನ್ನು ಪರಿಶೀಲನೆ ಮಾಡಿದ ಬಳಿಕ ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮೂರು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಕಾನೂನು ಆಯೋಗಕ್ಕೆ ಈ ಸಂಬಂಧ ಸೂಚನೆ ನೀಡಿತ್ತು. ದೇಶದಲ್ಲಿ ಮರಣದಂಡನೆ ಶಿಕ್ಷೆ ಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳಾಗಿಲ್ಲ.
ಅಲ್ಲದೆ ಪ್ರಸಕ್ತ ಸನ್ನಿವೇಶದಲ್ಲಿ ಗಲ್ಲುಶಿಕ್ಷೆಯ ಪ್ರಸ್ತುತತೆ ಇದೆಯೇ ಎಂಬ ಬಗ್ಗೆಯೂ ಅಧ್ಯಯನ ನಡೆಸುವಂತೆ ಸುಪ್ರೀಂಕೋರ್ಟ್ ಹೇಳಿತ್ತು. ಚರ್ಚೆ ಅಗತ್ಯ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ರಾಜ್ಯಸಭೆ ಸದಸ್ಯೆ ಕನ್ನಿಮೋಳಿ, ಮಹಾತ್ಮಾ ಗಾಂಧಿ ಮೊಮ್ಮೊಗ ಗೋಪಾಲಕೃಷ್ಣ ಗಾಂಧಿ ಸೇರಿದಂತೆ ಹಲವಾರು ನಾಯಕರು ದೇಶದಲ್ಲಿ ಗಲ್ಲುಶಿಕ್ಷೆ ಬೇಡ ಎಂದೇ ವಾದಿಸಿದ್ದರು.
ಅಲ್ಲದೆ ಕಳೆದ ತಿಂಗಳಷ್ಟೇ ಈ ಬಗ್ಗೆ ಕಾನೂನು ಆಯೋಗ ಗಲ್ಲು ಶಿಕ್ಷೆ ಬಗ್ಗೆ ಚರ್ಚೆಯೊಂದನ್ನೂ ನಡೆಸಿತ್ತು. ಅದರಲ್ಲಿ ಈ ಮೂವರು ನಾಯಕರು ಗಲ್ಲುಶಿಕ್ಷೆಯ ಅಪ್ರಸ್ತುತೆ ಬಗ್ಗೆ ವಾದಿಸಿದ್ದರು. ಗಲ್ಲುಶಿಕ್ಷೆ ಪರ ಸುಪ್ರೀಂಕೋರ್ಟ್‍ನ ಬಾರ್ ಅಸೋಸಿಯೇಶನ್‍ನ ದುಶ್ಯಂತ್ ದವೆ ಪ್ರತಿಪಾದಿಸಿದ್ದರು. ಕಾನೂನು ಆಯೋಗ ಈ ಎಲ್ಲಾ ಅಂಶಗಳನ್ನೂ ವರದಿಯಲ್ಲಿ ಸೇರಿಸಿದೆ. ಜತೆಗೆ ತಮಗೆ ಬಂದಿರುವ ಎಲ್ಲಾ ಸಲಹೆಗಳ ಬಗ್ಗೆಯೂ ಪರಿಶೀಲನೆ ನಡೆಸಿದೆ. ಸದ್ಯದಲ್ಲೇ ವರದಿಯನ್ನು ಬಿಡುಗಡೆ ಮಾಡಲಿದೆ.